ಉಪ್ಪಳ: ಸಾಹಿತ್ಯವು ರಸಾಸ್ವಾದನೆಗೆ ಸಂದರ್ಭ ಒದಗಿಸುವುದರೊಂದಿಗೆ ಸಮಾಜವನ್ನು ಒಳಿತಿನ ಕಡೆಗೆ ಮುನ್ನಡೆಸಲು ಸಹಾಯಕವಾಗಬೇಕು. ವೇದ, ಉಪನಿಷತ್ತುಗಳ ಆಶಯಗಳು, ಆದರ್ಶಗಳು ಕಥಾವಸ್ತುಗಳಾಗಿ ಮೂಡಿ ಬಂದಾಗ ಯುವಜನಾಂಗಕ್ಕೆ ಮಾರ್ಗದರ್ಶಕ ವಾಗಿರುತ್ತದೆ. ತಪ್ಪು ಹಾದಿಯಲ್ಲಿ ಸಾಗದಂತೆ ಪ್ರೇರೇಪಣೆ ನೀಡುತ್ತದೆ ಎಂದು ಹಿರಿಯ ಸಾಹಿತಿ, ಪತ್ರಕರ್ತ ಮಲಾರ್ ಜಯರಾಮ ರೈ ಹೇಳಿದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಕಾರದೊಂದಿಗೆ ಬಾಯಿಕಟ್ಟೆ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ನಡೆದ ಖ್ಯಾತ ಲೇಖಕಿ ವಿಜಯಲಕ್ಷ್ಮಿ ಶಾನುಭೋಗ್ ಅವರ 'ವ್ಯೂಹ' ಕಥಾ ಸಂಕಲನದ ಬಿಡುಗಡೆ ಮತ್ತು ಕಥಾ ವಾಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವ ಜನತೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಅದು ತಮ್ಮ ಅನುಭವ ಸಂಪತ್ತನ್ನು ಹೆಚ್ಚಿಸಿ, ಉತ್ತಮ ಸಾಹಿತ್ಯವನ್ನು ಸೃಜಿಸಲು ಸಹಾಯ ಮಾಡುತ್ತದೆ ಎಂದು ಮಲಾರ್ ಜಯರಾಮ ರೈ ಹೇಳಿದರು.
ಹಿರಿಯ ಸಾಹಿತಿ ರಾಧಾಕೃಷ್ಣ. ಕೆ ಉಳಿಯತಡ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕೃತಿ ಬಿಡುಗಡೆಕಾರರಾದ ಸಾಹಿತಿ ಡಾ.ಪಾರ್ವತಿ. ಜಿ ಐತಾಳ್ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಓನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಶಿಕ್ಷಕಿ ಆಶಾ ದಿಲೀಪ್ ಸುಳ್ಯಮೆ ಕೃತಿ ಪರಿಚಯ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ,ಸಾಹಿತಿ ಲಕ್ಷ್ಮಿ .ವಿ ಭಟ್, ಬಾಯಿಕಟ್ಟೆ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸುದರ್ಶನ ಪಾಣಿ ಬಲ್ಲಾಳ್ ಶುಭ ಹಾರೈಸಿದರು.
ಗ್ರೀಷ್ಮ ಕಾಟುಕುಕ್ಕೆ, ಸಾನಿಧ್ಯ ಭಟ್ ಮೀಯಪದವು,ಇಶಾನಿ ತೊಟ್ಟೆತ್ತೋಡಿ, ಕೊಡ್ಲಮೊಗರು ಪ್ರೌಢಶಾಲಾ ವಿದ್ಯಾರ್ಥಿನಿಯರಾದ ನಿಶ್ಮಿತಾ, ಸ್ವಾತಿ, ಯಶ್ಮಿತ, ಧನ್ಯಶ್ರೀ ಕಥಾ ವಾಚನ ಮಾಡಿದರು. ಕಥಾವಾಚನ ಮಾಡಿದವರಿಗೆ ಡಾ. ಕೆ. ಕೆ ಶಾನುಭೋಗ್ ಪುಸ್ತಕ ಉಡುಗೊರೆ ನೀಡಿದರು. ಬಬಿತಾ ಆಚಾರ್ಯ ಮತ್ತು ಮಾಲತಿ ಜಗದೀಶ್ ಭಾವಗೀತೆಗಳನ್ನು ಹಾಡಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ.ಪಿ.ಎನ್.ಮೂಡಿತ್ತಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೃತಿಗಾರ್ತಿ,ಲೇಖಕಿ ವಿಜಯಲಕ್ಷ್ಮಿ ಶಾನುಭೋಗ್ ವಂದಿಸಿದರು.

.jpg)
