ಜಮ್ಮು: ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಕರಾಳ ಘಟನೆ ನಡೆದು ಇಂದಿಗೆ ಒಂದು ತಿಂಗಳು ಕಳೆದಿದೆ. ಒಂದೆಡೆ ಭಯೋತ್ಪಾದಕರ ಪತ್ತೆಗೆ ಭದ್ರತಾ ಪಡೆಗಳು ಕಾರ್ಯತಂತ್ರ ರೂಪಿಸುತ್ತಿದ್ದರೆ, ಇನ್ನೊಂದು ಕಡೆ ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳು ಜೀವನೋಪಾಯವಿಲ್ಲದೇ ಪರಿತಪಿಸುತ್ತಿವೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ವಿವಿಧ ಸೇನಾ ಕಾರ್ಯಾಚರಣೆಯಲ್ಲಿ ಹಲವು ಭಯೋತ್ಪಾದಕರು ಹತ್ಯೆಯಾಗಿದ್ದಾರೆ. ಆದರೆ, ಪಹಲ್ಗಾಮ್‌ನಲ್ಲಿ ಹತ್ಯಾಕಾಂಡಕ್ಕೆ ಕಾರಣರಾದ ಭಯೋತ್ಪಾದಕರು ಭದ್ರತಾ ಪಡೆಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪಹಲ್ಗಾಮ್ ಹತ್ಯಾಕಾಂಡದ ರೂವಾರಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿರುವ ಭದ್ರತಾ ಪಡೆಗಳು, ಕಾಶ್ಮೀರದಾದ್ಯಂತ ಶಂಕಿತರನ್ನು ವಿಚಾರಣೆಗೆ ಒಳಪಡಿಸುತ್ತಿದೆ. ಸುಮಾರು 100 ಶಂಕಿತರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಬಂಧಿಸಿ ವಿವಿಧ ಜೈಲುಗಳಿಗೆ ಕಳಿಸಲಾಗಿದೆ.
ಏತನ್ಮಧ್ಯೆ, ಪ್ರವಾಸಿಗರು ಭೇಟಿ ನೀಡುವುದನ್ನು ನಿಲ್ಲಿಸಿದ್ದರಿಂದ ಪಹಲ್ಗಾಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸ್ಥಳೀಯರು ಜೀವನೋಪಾಯ ಕಳೆದುಕೊಂಡು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.
'ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಈ ಸ್ಥಳ ಈಗ ನಿರ್ಜನವಾಗಿದೆ. ಪ್ರತಿ ದಿನ ಸುಮಾರು ಸಾವಿರ ಪ್ರವಾಸಿಗರು ಪಹಲ್ಗಾಮ್‌ಗೆ ಭೇಟಿ ನೀಡುತ್ತಿದ್ದರು. ಪ್ರವಾಸಿಗರಿಂದಲೇ ಇಲ್ಲಿನ ಅಂಗಡಿಯವರು, ರಸ್ತೆಬದಿ ವ್ಯಾಪಾರಿಗಳು, ಕುದುರೆ ಸವಾರರು, ಕ್ಯಾಬ್ ಚಾಲಕರು ಮತ್ತು ಹೋಟೆಲ್ ಮಾಲೀಕರು ಸೇರಿದಂತೆ ಎಲ್ಲರೂ ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುತ್ತಿದ್ದರು' ಎಂದು ಟೂರ್ ಆಪರೇಟರ್ ನಾಸಿರ್ ಅಹ್ಮದ್ ಹೇಳಿದರು.
'1990ರ ಕಾಶ್ಮೀರ ದಂಗೆಯ ಸಮಯದಲ್ಲಿಯೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಆ ಸಮಯದಲ್ಲಿ ಸ್ಥಳೀಯ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಅವರಿಗೆ ಆತಿಥ್ಯ ನೀಡುವ ಮೂಲಕ ಕುಟುಂಬಗಳು ಜೀವನ ಸಾಗಿಸುತ್ತಿದ್ದವು. ಈಗ ಸ್ಥಳೀಯರು ಭೇಟಿ ನೀಡಲು ಭಯಪಡುತ್ತಿದ್ದಾರೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.
'ಪ್ರವಾಸೋದ್ಯಮವನ್ನೇ ಜೀವನೋಪಾಯ ಮಾಡಿಕೊಂಡವರ ಸ್ಥಿತಿ ನಿಜಕ್ಕೂ ದಯನೀಯವಾಗಿದೆ' ಎಂದು ಅಂಗಡಿ ಮಾಲೀಕ ಮೊಹಮ್ಮದ್ ಇರ್ಷಾದ್ ಹೇಳಿದರು.
'ವ್ಯಾಪಾರಿಗಳು, ವಾಹನ ಚಾಲಕರು ಸೇರಿದಂತೆ ಇಲ್ಲಿನ ಜನರು ಕಳೆದ ಒಂದು ತಿಂಗಳಿನಿಂದ ಒಂದು ಪೈಸೆಯನ್ನು ಗಳಿಸುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಕಷ್ಟ. ಸರ್ಕಾರ ಏನಾದರೂ ಕ್ರಮ ತೆಗೆದುಕೊಳ್ಳಬೇಕು' ಎಂದು ಮನವಿ ಮಾಡಿದರು.

