ರಾಯ್‌ಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಹತನಾಗಿದ್ದಾನೆ ಎಂದು ಅಧಿಕಾರಿಗಳು ಇಂದು (ಗುರುವಾರ) ತಿಳಿಸಿದ್ದಾರೆ.
ಇದೇ ವೇಳೆ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೊ ಹುತಾತ್ಮರಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಉಸೂರ್ ಪೊಲೀಸ್ ಠಾಣೆ ವ್ಯಾಪ್ತಿಯ ತುಮ್ರೆಲ್ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಸಿಆರ್‌ಪಿಎಫ್‌ನ ಕೋಬ್ರಾ ಘಟಕದ 210ನೇ ಬೆಟಾಲಿಯನ್, ಛತ್ತೀಸಗಢ ಪೊಲೀಸ್ ಡಿಆರ್‌ಜಿ ಮತ್ತು ಎಸ್‌ಟಿಎಫ್ ಪಡೆಗಳು ಜಂಟಿ ಕಾರ್ಯಾಚರಣೆಯಲ್ಲಿ ನಡೆಸಿವೆ.
ಈ ಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಕ್ಸಲ್ ವಾದ ತೊಡೆದುಹಾಕುವ ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೊ ಪಡೆ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.
ಛತ್ತೀಸಗಢದ ಬಸ್ತಾರ್ ಪ್ರದೇಶದಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಸಿಪಿಐ (ಮಾವೋವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿ, ನಕ್ಸಲ್ ನಾಯಕ ನಂಬಾಲಾ ಕೇಶವ್ ರಾವ್ ಅಲಿಯಾಸ್ ಬಸವರಾಜು (70) ಸೇರಿದಂತೆ 27 ನಕ್ಸಲರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.




