ನವದೆಹಲಿ: ಕಾನೂನು ಜಾರಿ ನಿರ್ದೇಶನಾಲಯ ಹಣ ದುರುಪಯೋಗ ಪ್ರಕರಣದ ಆರೋಪಿಗಳ ವಿರುದ್ಧ ಪುರಾವೆ ಇಲ್ಲದೇ ಆರೋಪಗಳನ್ನು ಮಾಡುವ ಪ್ರವೃತ್ತಿಯನ್ನು ಹಲವು ಪ್ರಕರಣಗಳಲ್ಲಿ ಗಮನಿಸಿದ್ದಾಗಿ ಸುಪ್ರೀಂಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.
ಆರೋಪಿಗಳು ಅಪರಾಧದಿಂದ ಬಂದ ಲಾಭ ಪಡೆಯುತ್ತಿದ್ದಾರೆ ಎನ್ನುವುದನ್ನು ಸಮರ್ಥಿಸುವ ಯಾವುದೇ ದಾಖಲೆಗಳನ್ನು ತನಿಖಾ ಸಂಸ್ಥೆ ಸಲ್ಲಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭೂಯಾನ್ ಅವರು ಅಭಿಪ್ರಾಯಪಟ್ಟಿದ್ದಾರೆ.
"ಇ.ಡಿ. ಸಲ್ಲಿಸಿದ ಹಲವು ಪ್ರಕರಣಗಳಲ್ಲಿ ಇದು ಕಂಡುಬಂದಿದೆ. ಯಾವುದೇ ಉಲ್ಲೇಖಗಳು ಇಲ್ಲದೇ ಕೇವಲ ಆರೋಪಗಳನ್ನು ಮಾಡುವ ವಿಧಾನ ಇದಾಗಿದೆ" ಎಂದು ಕೋರ್ಟ್ ಹೇಳಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ವಿ.ಎಸ್.ರಾಜು ಅವರು ಇದಕ್ಕೆ ಪ್ರತಿಕ್ರಿಯಿಸಿ, ಅಗತ್ಯ ಪುರಾವೆ ಇಲ್ಲದೇ ಏಜೆನ್ಸಿ ಪ್ರಕರಣಗಳನ್ನು ದಾಖಲಿಸುತ್ತದೆ ಎಂಬ ಭಾವನೆಯನ್ನು ಹೋಗಲಾಡಿಸುವ ಪುರಾವೆಗಳನ್ನು ಸಲ್ಲಿಸುವುದಾಗಿ ಭರವಸೆ ನೀಡಿದರು.
ಛತ್ತೀಸ್ ಗಢ ಮದ್ಯ ಹಗರಣದ ಆರೋಪಿಯೊಬ್ಬ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಕ್ಕೆ ಬಂದಿದೆ. ಅಪರಾಧದಿಂದ ಬಂದಿದೆ ಎನ್ನಲಾದ 40 ಕೋಟಿ ರೂಪಾಯಿಗೂ ಆರೋಪಿಗೂ ಸಂಬಂಧ ಕಲ್ಪಿಸಲು ಅಗತ್ಯ ದಾಖಲೆಗಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.




