ವಿಶ್ವಸಂಸ್ಥೆ: ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಮತ್ತು ಸಮಗ್ರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪಾನೀಯದ ಕೊಡುಗೆಯನ್ನು ಎತ್ತಿ ತೋರಿಸುವ ಅಂತರರಾಷ್ಟ್ರೀಯ ಚಹಾ ದಿನವನ್ನು ಸ್ಮರಿಸಲು ಭಾರತವು ವಿಶ್ವಸಂಸ್ಥೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನೀರಿನ ನಂತರ ವಿಶ್ವದಲ್ಲಿ ಅತಿ ಹೆಚ್ಚು ಸೇವಿಸುವ ಪಾನೀಯದ ಆಚರಣೆಯಾದ ಅಂತರರಾಷ್ಟ್ರೀಯ ಚಹಾ ದಿನವನ್ನು ಗುರುತಿಸಲು 'ಜೀವನೋಪಾಯಕ್ಕಾಗಿ ಚಹಾ, ಎಸ್‌ಡಿಜಿಗಳಿಗಾಗಿ(ಸುಸ್ಥಿರ ಅಭಿವೃದ್ಧಿ ಗುರಿ) ಚಹಾ' ಎಂಬ ವಿಷಯದ ಮೇಲೆ ಬುಧವಾರ ವಿಶ್ವಸಂಸ್ಥೆಯ ಭಾರತದ ಶಾಶ್ವತ ಮಿಷನ್ ಉನ್ನತ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಪ್ರಸಿದ್ಧ ಡಾರ್ಜಿಲಿಂಗ್ ಚಹಾ, ಮಸಾಲಾ ಚಾಯ್, ಅಸ್ಸಾಂ ಮತ್ತು ನೀಲಗಿರಿ ಚಹಾಗಳು ಸೇರಿದಂತೆ ವಿವಿಧ ಭಾರತೀಯ ಚಹಾಗಳನ್ನು ಅತಿಥಿಗಳು ಸವಿಯುವುದರೊಂದಿಗೆ ಕಾರ್ಯಕ್ರಮ ಅಂತ್ಯವಾಯಿತು.
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್, ನ್ಯೂಯಾರ್ಕ್‌ನಲ್ಲಿರುವ ಎಫ್‌ಎಒ ವಿಶ್ವಸಂಸ್ಥೆ ಸಂಪರ್ಕ ಕಚೇರಿಯ ನಿರ್ದೇಶಕಿ ಆಂಜೆಲಿಕಾ ಜಾಕೋಮ್ ಮತ್ತು ಇತರ ಪ್ರಮುಖ ಚಹಾ ಉತ್ಪಾದಿಸುವ ದೇಶಗಳಾದ ಕೀನ್ಯಾ, ಶ್ರೀಲಂಕಾ ಮತ್ತು ಚೀನಾದ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಮಾತನಾಡಿದರು. ಚಹಾ ಬೆಳೆಗಾರರು, ವಿಶೇಷವಾಗಿ ಸಣ್ಣ ರೈತರು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸಿದರು.
ಭಾರತದಲ್ಲಿ ಚಹಾ ಎಂದರೆ ಕೇವಲ ವ್ಯಾಪಾರ ಮತ್ತು ರುಚಿಯ ಕಥೆಯಲ್ಲ, ಬದಲಾಗಿ ಪರಿವರ್ತನೆಯ ಕಥೆಯೂ ಆಗಿದೆ. 19ನೇ ಶತಮಾನದ ಆರಂಭದಲ್ಲಿ ಅಸ್ಸಾಂನ ಬೆಟ್ಟಗಳು, ಡಾರ್ಜಿಲಿಂಗ್ ಮತ್ತು ನೀಲಗಿರಿ ಪರ್ವತಗಳಿಂದ ಆರಂಭವಾದ ಭಾರತದ ಚಹಾ ಉದ್ಯಮವು ಗ್ರಾಮೀಣ ಉದ್ಯೋಗ, ಮಹಿಳಾ ಸಬಲೀಕರಣ ಮತ್ತು ರಫ್ತು-ನೇತೃತ್ವದ ಅಭಿವೃದ್ಧಿಯ ಮೂಲಾಧಾರವಾಗಿ ಬೆಳೆದಿದೆ'ಎಂದು ವಿಶ್ವಸಂಸ್ಥೆಯ ರಾಯಭಾರಿಗಳು, ಹಿರಿಯ ವಿಶ್ವಸಂಸ್ಥೆಯ ಸಿಬ್ಬಂದಿ ಮತ್ತು ಸಮುದಾಯದ ಸದಸ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹರೀಶ್ ಹೇಳಿದರು.
2015ರ ಅಕ್ಟೋಬರ್‌ನಲ್ಲಿ ಚಹಾದ ಕುರಿತು ಆಹಾರ ಮತ್ತು ಕೃಷಿ ಸಂಸ್ಥೆಯಲ್ಲಿ(ಎಫ್‌ಎಒ) ಭಾರತ ಮಂಡಿಸಿದ ಪ್ರಸ್ತಾಪದ ನಂತರ 2019ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮೇ 21 ಅನ್ನು ಅಂತರರಾಷ್ಟ್ರೀಯ ಚಹಾ ದಿನವೆಂದು ಘೋಷಿಸಿತು.
ವಿಶ್ವದಾದ್ಯಂತ ಚಹಾದ ದೀರ್ಘ ಇತಿಹಾಸ ಮತ್ತು ಸಾಂಸ್ಕೃತಿಕ ಹಾಗೂ ಆರ್ಥಿಕ ಮಹತ್ವ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗ್ರಾಮೀಣ ಅಭಿವೃದ್ಧಿ, ಬಡತನ ನಿವಾರಣೆ ಮತ್ತು ಆಹಾರ ಭದ್ರತೆಯಲ್ಲಿ ಅದು ವಹಿಸುವ ಮಹತ್ವದ ಪಾತ್ರವನ್ನು ಸಾಮಾನ್ಯ ಸಭೆಯ ನಿರ್ಣಯವು ಗುರುತಿಸಿದೆ.
ಭಾರತವು ಜಾಗತಿಕವಾಗಿ ಚಹಾದ ಅತಿದೊಡ್ಡ ಉತ್ಪಾದಕರು ಮತ್ತು ಗ್ರಾಹಕರಿರುವ ದೇಶಗಳಲ್ಲಿ ಒಂದಾಗಿದೆ. ಈ ವಲಯದಲ್ಲಿ ನೇರವಾಗಿ 15 ಲಕ್ಷ ಮಂದಿಗಿಂತಲೂ ಹೆಚ್ಚು ಕಾರ್ಮಿಕರಿದ್ದಾರೆ.




