ಮುಂಬೈ: ಭಾರತ ಮತ್ತು ಪಾಕಿಸ್ತಾನದ ನಡುವೆ ತಲೆದೋರಿರುವ ಬಿಕ್ಕಟ್ಟಿನಿಂದಾಗಿ ಸತತ ಎರಡನೇ ದಿನವಾದ ಶುಕ್ರವಾರವೂ ದೇಶೀಯ ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರಾಯಿತು. ಇದರಿಂದ ಸೂಚ್ಯಂಕಗಳು ಶೇ 1ರಷ್ಟು ಕುಸಿತ ಕಂಡಿವೆ.
ಎರಡು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ₹7 ಲಕ್ಷ ಕೋಟಿ ಕರಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 880 ಅಂಶ ಇಳಿಕೆ ಕಂಡು, 79,454 ಅಂಶಗಳಲ್ಲಿ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 265 ಅಂಶ ಇಳಿಕೆ ಕಂಡು, 24,008 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.
ಗುರುವಾರ ರಾತ್ರಿ ಪಾಕಿಸ್ತಾನವು ಜಮ್ಮು ಮತ್ತು ಪಠಾಣ್‌ಕೋಟ್ ಭಾಗದಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಇವುಗಳನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ. ಇದರಿಂದ ಉಭಯ ದೇಶಗಳ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ ಹೆಚ್ಚಿದೆ. ಇದು ಷೇರುಪೇಟೆ ಮೇಲೂ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
'ಸಂಘರ್ಷದ ಹೊರತಾಗಿಯೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮುಂದುವರಿಸಿದ್ದಾರೆ. ಆದರೆ, ರಿಟೇಲ್ ಹೂಡಿಕೆದಾರರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ' ಎಂದು ಜಿಯೊಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಸೆನ್ಸೆಕ್ಸ್ ಗುಚ್ಛದಲ್ಲಿನ ಐಸಿಐಸಿಐ ಬ್ಯಾಂಕ್, ಪವರ್ ಗ್ರಿಡ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್, ಅದಾನಿ ಪೋರ್ಟ್ಸ್, ಮಹೀಂದ್ರ ಆಯಂಡ್ ಮಹೀಂದ್ರ, ಎನ್‌ಟಿಪಿಸಿ ಷೇರಿನ ಮೌಲ್ಯ ಇಳಿಕೆಯಾಗಿದೆ.
ಟಾಟಾ ಮೋಟರ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರಿನ ಮೌಲ್ಯ ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಶೇ 1.53ರಷ್ಟು ಹೆಚ್ಚಳವಾಗಿದ್ದು, ಪ್ರತಿ ಬ್ಯಾರೆಲ್‌ಗೆ 63.80 ಡಾಲರ್ ಆಗಿದೆ.




