ನವದೆಹಲಿ: ಜನರ ಸುರಕ್ಷತೆ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಅಗತ್ಯ ಕ್ರಮ ವಹಿಸಲು ಸ್ಥಳೀಯ ಆಡಳಿತಗಳಿಗೆ ನಿರ್ದೇಶಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಬಿಗುವಿನ ಸ್ಥಿತಿ ಮೂಡಿರುವಂತೆಯೇ, ಒಂದು ವೇಳೆ ತೀವ್ರ ದಾಳಿ ನಡೆದಲ್ಲಿ ಅಗತ್ಯ ಸೇವೆಗಳಿಗೆ ಧಕ್ಕೆಯಾಗದಂತೆ ಕ್ರಮವಹಿಸಬೇಕು ಎಂದು ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯವು ಈ ಸಂಬಂಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.
ತುರ್ತು ಸಂದರ್ಭಗಳಲ್ಲಿ ಅಗತ್ಯ ಕ್ರಮವಹಿಸಲು 1968ರ ನಾಗರಿಕ ರಕ್ಷಣಾ ನಿಯಮಗಳ ಸೆಕ್ಷನ್ 11ರ ಅನ್ವಯ ನಾಗರಿಕ ರಕ್ಷಣಾ ನಿರ್ದೇಶನಾಲಯಕ್ಕೆ ವಿಶೇಷಾಧಿಕಾರ ನೀಡಬೇಕು ಎಂದಿದೆ.
'ತುರ್ತು ಅಗತ್ಯಗಳಿಗೆ ತಗಲುವ ವೆಚ್ಚ ಭರಿಸಲು ಸ್ಥಳೀಯ ಆಡಳಿತಗಳಲ್ಲಿ ಲಭ್ಯವಿರುವ ನಿಧಿ ಬಳಸಲು ಪ್ರಥಮ ಆದ್ಯತೆ ನೀಡಬೇಕು' ಎಂದು ನಾಗರಿಕ ರಕ್ಷಣೆ, ಗೃಹರಕ್ಷಕರ ದಳ ಮತ್ತು ಅಗ್ನಿಶಾಮಕ ದಳಗಳ ಮಹಾ ನಿರ್ದೇಶಕರಾದ ವಿವೇಕ್ ಶ್ರೀವಾತ್ಸವ ಪತ್ರದಲ್ಲಿ ತಿಳಿಸಿದ್ದಾರೆ.




