HEALTH TIPS

ಭಯೋತ್ಪಾದನೆ ವಿರುದ್ಧವಷ್ಟೇ ಭಾರತ ದಾಳಿ ನಡೆಸಿದೆ: ಜೈಶಂಕರ್‌

ನವದೆಹಲಿ: ಭಾರತ ಮತ್ತು ‍ಪಾಕಿಸ್ತಾನದ ಮಧ್ಯದ ಉದ್ವಿಗ್ನ ಪರಿಸ್ಥಿತಿ ಅಧಿಕಗೊಂಡ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರಿಗೆ ಗುರುವಾರ ರಾತ್ರಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

'ಪಾಕಿಸ್ತಾನವು ಉದ್ವಿಗ್ನತೆಯನ್ನು ಅಧಿಕಗೊಳಿಸಿದರೆ ಭಾರತವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದೆ' ಎಂದು ರುಬಿಯೊ ಅವರಿಗೆ ಜೈಶಂಕರ್ ಅವರು ತಿಳಿಸಿದ್ದಾರೆ. ಈ ಮಾತುಕತೆ ಕುರಿತು ಜೈಶಂಕರ್‌ ಅವರು ತನ್ನ 'ಎಕ್ಸ್‌'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

'ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಕೆಲಸ ಮಾಡಲು ಅಮೆರಿಕವು ತೊರಿದ ಬದ್ಧತೆ ಅಭಿನಂದನಾರ್ಹ. ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧವಷ್ಟೇ ಭಾರತ ದಾಳಿ ನಡೆಸಿದೆ. ಉದ್ವಿಗ್ನತೆಯನ್ನು ಸೃಷ್ಟಿಸುವ ಯತ್ನಕ್ಕೆ ನಾವು ತಕ್ಕ ಉತ್ತರ ನೀಡಲಿದ್ದೇವೆ' ಎಂದು ರುಬಿಯೊ ಅವರಿಗೆ ಹೇಳಿರುವುದಾಗಿ ಜೈಶಂಕರ್‌ ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

'ಭಾರತ ಮತ್ತು ಪಾಕಿಸ್ತಾನವು ನೇರವಾಗಿ ಮಾತುಕತೆ ನಡೆಸುವುದಕ್ಕೆ ನಮ್ಮ ಬೆಂಬಲವಿದೆ' ಎಂಬುದಾಗಿ ಮಾತುಕತೆ ವೇಳೆ ರುಬಿಯೊ ಅವರು ಹೇಳಿದ್ದಾರೆ' ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಟಮ್ಮಿ ಬ್ರೂಸ್‌ ಹೇಳಿದ್ದಾರೆ.

------

ಟ್ರಂಪ್‌ ಪ್ರಸ್ತಾವ ತಿರಸ್ಕಾರ

ಉದ್ವಿಗ್ನ ಸ್ಥಿತಿ ಶಮನಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮುಂದಿಟ್ಟಿರುವ ಪ್ರಸ್ತಾವವನ್ನು ಭಾರತವು ನಯವಾಗಿಯೇ ತಿರಸ್ಕರಿಸಿದೆ. ಆದರೆ, ಎರಡೂ ದೇಶಗಳು ತಕ್ಷಣವೇ ಉದ್ವಿಗ್ನ ಸ್ಥಿತಿಯನ್ನು ಶಮನಗೊಳಿಸಿಕೊಳ್ಳಬೇಕು ಎಂದು ಅಮೆರಿಕ ಹೇಳಿದೆ. ಗುರುವಾರ ರಾತ್ರಿ ನಡೆದ ಬೆಳವಣಿಗಳಿಗೂ ಮೊದಲೇ ಭಾರತವು ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು.

ಮಾರ್ಕೊ ರುಬಿಯೊ ಅವರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್‌ ಅವರೊಂದಿಗೂ ಮಾತುಕತೆ ನಡೆಸಿ, 'ಭಯೋತ್ಪಾದನಾ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ಅಂತ್ಯಗೊಳಿಸಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಿ' ಎಂದು ಹೇಳಿದ್ದಾರೆ.

----------------------------

ಗುರುವಾರ ರಾತ್ರಿಯ ಬೆಳವಣಿಗೆಗಳು

* ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರದ ಎಲ್ಲ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಎರಡು ದಿನಗಳ ಮಟ್ಟಿಗೆ ಮುಚ್ಚಲು ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಪಂಜಾಬ್‌ನಲ್ಲಿ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ಮುಂದಿನ ಮೂರು ದಿನಗಳವರೆಗೆ ಮುಚ್ಚಲಾಗುವುದು ಎಂದು ಅಲ್ಲಿನ ಸರ್ಕಾರ ಹೇಳಿದೆ

* ದೆಹಲಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲ ಸರ್ಕಾರಿ ನೌಕರರ ರಜೆಗಳನ್ನು ರದ್ದು ಮಾಡಲಾಗಿದೆ. ಆರೋಗ್ಯ ಮತ್ತು ವಿಪತ್ತು ನಿರ್ವಹಣೆ ಸಂಬಂಧ ಸಿದ್ಧತೆ ಮಾಡಿಕೊಳ್ಳುವ ಕುರಿತು ಅಧಿಕಾರಿಗಳು ಸಭೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿಯೂ ಎಲ್ಲ ಸರ್ಕಾರಿ ನೌಕರರ ರಜೆಯನ್ನು ರದ್ದು ಮಾಡಲಾಗಿದೆ

* ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರವ ಪಂಜಾಬ್‌, ರಾಜಸ್ಥಾನ, ಗುಜರಾತ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ, ದೆಹಲಿ, ಹರಿಯಾಣ, ಬಿಹಾರದಲ್ಲಿಯೂ ಎಚ್ಚರಿಕೆ ವಹಿಸಲಾಗಿದೆ. ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ

* ಗೃಹ ಸಚಿವ ಅಮಿತ್‌ ಶಾ ಅವರು ಬಿಎಸ್‌ಎಫ್‌, ಸಿಐಎಸ್‌ಎಫ್‌ ಸೇರಿದಂತೆ ಎಲ್ಲ ಗಡಿ ಭದ್ರತಾ ಪಡೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು. ಗಡಿಯಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆದುಕೊಂಡರು.

* ಇಸ್ರೇಲ್‌ ಮೇಲೆ ಹಮಾಸ್‌ ರಾಕೆಟ್‌ ದಾಳಿ ನಡೆಸಿದ ರೀತಿಯಲ್ಲಿಯೇ ಪಾಕಿಸ್ತಾನವು ಜಮ್ಮುವಿನ ಹಲವು ಪ್ರದೇಶಗಳ ಮೇಲೆ ದಾಳಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ

* ಉದ್ವಿಗ್ನತೆಯನ್ನು ಶಮನಗೊಳಿಸಿಕೊಳ್ಳುವ ಬಗ್ಗೆ ಗಮನಹರಿಸುವಂತೆ ಕೋರಲು ಸೌದಿ ಅರೇಬಿಯಾದ ಉಪ ವಿದೇಶಾಂಗ ಸಚಿವ ಆದಿಲ್‌ ಅಲ್‌ ಜುಬೇರ್‌ ಅವರು ಗುರುವಾರ ಭಾರತಕ್ಕೆ ತುರ್ತು ಭೇಟಿ ನೀಡಿದರು. ಸೌದಿ ಅರೇಬಿಯಾದ ಸಂದೇಶವನ್ನು ಆದಿಲ್‌ ಅವರು ತಂದಿದ್ದಾರೆ ಎನ್ನಲಾಗಿದೆ

* ಪಠಾಣ್‌ಕೋಟ್‌ ಬಳಿ ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಆದರೆ, ಸೇನೆಯು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ

* ಭಾರತದ 28 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಸೇನೆ ಹೇಳಿದೆ. ಭಾರತದ ದಾಳಿಯಲ್ಲಿ ಇದುವರೆಗೆ 12 ಮಕ್ಕಳು ಸೇರಿದಂತೆ 32 ಮಂದಿ ಮೃತಪಟ್ಟಿದ್ದಾರೆ ಎಂದೂ ಹೇಳಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries