HEALTH TIPS

ಪುರಿ ಸಮುದ್ರದಲ್ಲಿ ಸ್ಪೀಡ್‌ ಬೋಟ್‌ ದುರಂತ: ಸೌರವ್ ಗಂಗೂಲಿ ಸೋದರ, ಅತ್ತಿಗೆ ಪಾರು

ಪುರಿ: ಒಡಿಶಾದ ಪುರಿಯ ಕಡಲತೀರದಲ್ಲಿ ವಿಹರಿಸುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಸ್ಪೀಡ್‌ ಬೋಟ್ ದುರಂತದಲ್ಲಿ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅಣ್ಣ ಸ್ನೇಹಶೀಶ್ ಗಂಗೂಲಿ ಮತ್ತು ಅತ್ತಿಗೆ ಅರ್ಪಿತಾ ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಘಟನೆ ಶನಿವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಶೀಶ್‌ ದಂಪತಿ ಲೈಟ್‌ಹೌಸ್‌ ಬಳಿ ಸ್ಪೀಡ್‌ಬೋಟ್‌ನಲ್ಲಿ ವಿಹರಿಸುತ್ತಿದ್ದರು. ಆ ಸಂದರ್ಭದಲ್ಲಿ ಬೃಹತ್ ಅಲೆಯೊಂದು ದೋಣಿಗೆ ಅಪ್ಪಳಿಸಿದೆ. ನಿಯಂತ್ರಣ ಕಳೆದುಕೊಂಡ ದೋಣಿ, ನೀರಿಗೆ ಮಗುಚಿದ ವಿಡಿಯೊ ಸ್ಥಳೀಯ ಟಿ.ವಿ. ಚಾನಲ್‌ಗಳಲ್ಲಿ ಪ್ರಸಾರವಾಗಿದೆ.

'ದೇವರೇ ನಮ್ಮನ್ನು ಕಾಪಾಡಿದ. ಆ ಆಘಾತದಿಂದ ಈಗಲೂ ಹೊರಬರಲು ಸಾಧ್ಯವಾಗಿಲ್ಲ. ಇಂಥ ಘಟನೆ ಯಾರೊಂದಿಗೂ ಆಗಬಾರದು. ಸಮುದ್ರದಲ್ಲಿ ಜಲ ಸಾಹಸಗಳನ್ನು ಸರಿಯಾಗಿ ನಿರ್ವಹಿಸುವುದು ಅಗತ್ಯ. ಕೋಲ್ಕತ್ತಕ್ಕೆ ಮರಳಿದ ನಂತರ ಈ ಕುರಿತು ಪುರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ' ಎಂದು ಅರ್ಪಿತಾ ಅವರು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

'ಅಪ್ಪಳಿಸಿದ ಅಲೆಯು ಸುಮಾರು ಹತ್ತು ಮಹಡಿಯಷ್ಟು ಎತ್ತರವಿತ್ತು. ಒಮ್ಮೆಲೆ ದೋಣಿಯನ್ನು ಎತ್ತಿಹಾಕಿತು. ನಮ್ಮನ್ನೂ ಒಳಗೊಂಡು ಅದರೊಳಗಿದ್ದ ಇತರ ಪ್ರಯಾಣಿಕರು ಸಮುದ್ರಕ್ಕೆ ಬಿದ್ದೆವು. ತಟರಕ್ಷಕರು ಸಕಾಲಕ್ಕೆ ಬಂದು ಎಲ್ಲರನ್ನೂ ರಕ್ಷಿಸಿದರು. ಅವರಿಗೆ ಧನ್ಯವಾದಗಳು. ಆದರೆ ಆಯೋಜಕರ ದುರಾಸೆಗೆ ಇಂಥ ದುರ್ಘಟನೆ ಸಂಭವಿಸಿದೆ' ಎಂದು ಅರ್ಪಿತಾ ಆರೋಪಿಸಿದ್ದಾರೆ.

'ದೋಣಿಯು ಹತ್ತು ಪ್ರಯಾಣಿಕರಿಗೆ ವಿನ್ಯಾಸಗೊಂಡಿದ್ದರೂ, ಕೇವಲ ನಾಲ್ಕು ಜನರನ್ನು ಹತ್ತಿಸಿಕೊಳ್ಳಲಾಗಿತ್ತು. ಭಾರೀ ಅಲೆಗಳು ಅಪ್ಪಳಿಸಿದಾಗ ಕಡಿಮೆ ಭಾರ ಹೊತ್ತಿದ್ದ ದೋಣಿಗೆ ನಿಯಂತ್ರಣ ಸಾಧ್ಯವಾಗಲಿಲ್ಲ. ಕಡಲು ಪ್ರಕ್ಷುಬ್ಧಗೊಂಡಿತ್ತು. ಅಂಥ ಸಂದರ್ಭದಲ್ಲಿ ಸುರಕ್ಷತೆಯನ್ನು ಪ್ರಶ್ನಿಸಲಾಗಿತ್ತು. ಕಡಲ ಸಾಹಸದ ವಿಷಯದಲ್ಲಿ ಸರ್ಕಾರ ಇನ್ನಷ್ಟು ಭಿಗಿ ಕ್ರಮಗಳನ್ನು ಜಾರಿಗೆ ತರಬೇಕಿದೆ' ಎಂದಿದ್ದಾರೆ.

'ಖಾಸಗಿ ಸಂಸ್ಥೆಯೊಂದು ಇಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸುತ್ತಿದ್ದು, ಬಹುತೇಕ ಸಿಬ್ಬಂದಿಗೆ ಹೆಚ್ಚಿನ ತರಬೇತಿ ಇಲ್ಲ. ಸಮುದ್ರ ಪ್ರಕ್ಷುಬ್ಧಗೊಂಡರೆ ಯಾವ ಬಗೆಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಅವರಿಗೆ ತಿಳಿದಿಲ್ಲ' ಎಂದು ಸ್ಥಳೀಯರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries