ಬದಿಯಡ್ಕ: ನಿರಂತರ ಸುರಿಯುತ್ತಿರುವ ವರ್ಷಧಾರೆಯಿಂದ ಗ್ರಾಮೀಣ ಪ್ರದೇಶದ ಜನಜೀವನ ಅತಂತ್ರವಾಗಿದೆ. ರಸ್ತೆಗಳಲ್ಲಿ ಹರಿಯುತ್ತಿರುವ ನೀರು, ಮರಗಳ ನೆಲಕಚ್ಚುವಿಕೆ, ವಿದ್ಯುತ್ ಸಂಪರ್ಕದ ಮೊಟಕುಗಳಿಂದ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ನೀರ್ಚಾಲು-ಪುದುಕೋಳಿ-ಮಾನ್ಯ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ವಾಹನ ಸಂಚಾರ ಮೊಟಕುಗೊಂಡಿದೆ. ಮಳೆ ನೀರು ಹರಿಯುತ್ತಿರುವುದರಿಂದ ದ್ವಿಚಕ್ರವಾಹನ ಸವಾರರು ವಾಹನ ನಿಲ್ಲಿಸಿ ರಸ್ತೆ ಹುಡುಕಿ ತೆರಳಬೇಕಾದ ದುರವಸ್ಥೆ ವರದಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಮೊಟಕುಗೊಂಡಿದ್ದ ವಿದ್ಯುತ್ ಸಂಪರ್ಕ ಗುರುವಾರ ರಾತ್ರಿ ಪುನಃಸ್ಥಾಪಿಸಲ್ಪಟ್ಟರೂ ಕಣ್ಣಾಮುಚ್ಚಾಲೆಗೆ ಕೊನೆ ಇಲ್ಲವಾಗಿದೆ.
ಚಿಮ್ಮಿದ ಕಾರಂಜಿ:
ಮಳೆಯ ಮಧ್ಯೆ ಶುಕ್ರವಾರ ಬೆಳಿಗ್ಗೆ ಪುದುಕೋಳಿ ಕೊರುಂಗುತೊಟ್ಟಿಯಲ್ಲಿ ಜಲಜೀವನ ಮಿಷನ್ ಕುಡಿಯುವ ನೀರಿಗಾಗಿ ಅಳವಡಿಸಿದ್ದ ಪೈಫ್ ಲೈನ್ ಜಂಕ್ಷನ್ ವೊಂದರಿಂದ ಹಠಾತ್ ನೀರು ಚಿಮ್ಮತೊಡಗಿದ್ದು ಪರಿಸರ ವಾಸಿಗಳನ್ನು ಚಕಿತಗೊಳಿಸಿತು. ಅಪೂರ್ಣ ಪೈಪ್ ಹಾಗೂ ಯೋಜನೆ ಅರ್ಧದಲ್ಲೇ ಮೊಟಕುಗೊಂಡಿದ್ದರಿಂದ ಇನ್ನೂ ನೀರು ಸಂಪರ್ಕ ಲಭಿಸದ ಪೈಪ್ ಮೂಲಕ ಎತ್ತರೆತ್ತರಕ್ಕೆ ನೀರು ಚಿಮ್ಮುತ್ತಿರುವುದು ಕಂಡುಬಂದಿದೆ. ಪಕ್ಕದಲ್ಲಿ ಕೃಷಿ ತೋಟಗಳಿದ್ದು ಕೆಸರು ನೀರು ಸಹಿತ ಮಾಲಿನ್ಯಗಳು ತೋಟದೊಳಗೆ ತುಂಬಿಕೊಂಡಿದೆ.
ಪೈಫ್ ಜಂಕ್ಷನ್ ಮೂಲಕ ನೀರು ಚಿಮ್ಮುತ್ತಿರುವ ಬಗ್ಗೆ ಸ್ಥಳೀಯ ಗ್ರಾ.ಪಂ.ಸದಸ್ಯೆಗೆ ಮಾಹಿತಿ ನೀಡಲಾಗಿದ್ದು ಯೋಜನೆಯ ಪ್ರಮುಖರಿಗೆ ಮಾಹಿತಿ ನೀಡಿರುವುದಾಗಿ ಸದಸ್ಯೆ ತಿಳಿಸಿದ್ದು ಸಂಜೆಯಾದರೂ ಯಾರೂ ಈ ಬಗ್ಗೆ ವಿಚಾರಿಸಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.




.jpg)
.jpg)

