HEALTH TIPS

ಕಾಸರಗೋಡು ಕನ್ನಡಿಗರಿಗೆ ರಿಲೀಫ್‌, ಮಲಯಾಳ ಕಡ್ಡಾಯ ಮಸೂದೆಗೆ ಸಹಿ ಹಾಕಲು ನಿರಾಕರಿಸಿದ ರಾಷ್ಟ್ರಪತಿ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಕನ್ನಡಿಗರು ಸೇರಿದಂತೆ ಕೇರಳದ ಗಡಿ ಜಿಲ್ಲೆಗಳ ಅನ್ಯ ಭಾಷಿಕರಿಗೆ ರಾಷ್ಟ್ರಪತಿಗಳಿಂದ ರಿಲೀಫ್‌ ಸಿಕ್ಕಿದೆ. ರಾಜ್ಯದಲ್ಲಿ ಮಲೆಯಾಳ ಭಾಷೆಯನ್ನು ಉತ್ತೇಜಿಸುವ ಮತ್ತು ಪೋಷಿಸುವ ಉದ್ದೇಶದಿಂದ ಕೇರಳ ವಿಧಾನಸಭೆ ಅಂಗೀಕರಿಸಿದ ಮಲೆಯಾಳ ಭಾಷಾ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಲು ನಿರಾಕರಿಸಿದ್ದಾರೆ.

ಆದರೆ, ಅನುಮೋದನೆ ನೀಡಲು ನಿರಾಕರಿಸಿರುವ ರಾಷ್ಟ್ರಪತಿಗಳು, ಅಧಿಸೂಚನೆಯನ್ನು ವಾಪಸ್‌ ಮಾಡುತ್ತಿರುವುದಕ್ಕೆ ಯಾವುದೇ ಕಾರಣವನ್ನು ತಿಳಿಸಿಲ್ಲ. ಸರಕಾರಿ ವ್ಯವಹಾರಗಳನ್ನು ಸಂಪೂರ್ಣವಾಗಿ ಅಧಿಕೃತ ಭಾಷೆ ಮಲೆಯಾಳದಲ್ಲಿ ಮಾಡುವುದರಿಂದ ತಮಿಳು ಮತ್ತು ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದಂತಾಗುತ್ತದೆ ಎಂದು ಕೇರಳ ಸರಕಾರದ ಕ್ರಮದ ವಿರುದ್ಧ ದೂರು ನೀಡಲಾಗಿತ್ತು.

ಉಮ್ಮನ್‌ ಚಾಂಡಿ ಸರಕಾರ ರೂಪಿಸಿದ್ದ ಮಸೂದೆ


ಈ ಹಿಂದಿನ ಉಮ್ಮನ್‌ ಚಾಂಡಿ ನೇತೃತ್ವದ ಯುಡಿಎಫ್‌ ಸರಕಾರ ಅಂಗೀಕರಿಸಿದ ಮಸೂದೆಯನ್ನು ಆ ಸಮಯದಲ್ಲಿ ರಾಜ್ಯಪಾಲರಾಗಿದ್ದ ನ್ಯಾಯಮೂರ್ತಿ ಪಿ. ಸದಾಶಿವಂ ಅವರು ರಾಷ್ಟ್ರಪತಿ ಅವಗಾಹನಕ್ಕೆ ಕಳುಹಿಸಿದ್ದರು. ಮಸೂದೆ ಅಂಗೀಕಾರವಾದಲ್ಲಿ ಇದು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಹಾನಿಯುಂಟು ಮಾಡುತ್ತದೆ ಎಂಬ ಅಭಿಪ್ರಾಯಗಳು ಆಗಲೂ ಆಡಳಿತ ಪಕ್ಷದಿಂದ ಇತ್ತು. ಈ ನಿಬಂಧನೆಗಳು ಕೇಂದ್ರ ಭಾಷಾ ಕಾಯಿದೆಗೆ ವಿರುದ್ಧವಾಗಿವೆ ಎಂದು ಕಾನೂನು ಇಲಾಖೆಯೂ ಸೂಚಿಸಿತ್ತು.

ನಂತರ, ಮಸೂದೆ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರ್ಬಂಧಿಸುತ್ತದೆಯೇ ಎಂದು ಪರಿಶೀಲಿಸಿ ನಿರ್ಧರಿಸುವಂತೆ ರಾಷ್ಟ್ರಪತಿಗಳು ಸೂಚಿಸಿದ್ದರು. ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರಪತಿಯವರ ಪರವಾಗಿ ಮಸೂದೆಯನ್ನು ಪರಿಶೀಲಿಸಿತ್ತು. ಈ ಸಂಬಂಧ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿತ್ತು.

ಆದರೆ, 2024ರಲ್ಲಿ ಕೇಂದ್ರ ಗೃಹ ಸಚಿವಾಲಯ ಎತ್ತಿದ್ದ ಕೆಲವು ಅನುಮಾನಗಳನ್ನು ರಾಜ್ಯ ಸರಕಾರ ಸ್ಪಷ್ಟಪಡಿಸಿತ್ತು. ಆದಾಗ್ಯೂ ಗೃಹ ಸಚಿವಾಲಯದ ಶಿಫಾರಸಿನಂತೆ ಅನುಮತಿಯನ್ನು ನಿರಾಕರಿಸಲಾಗಿದೆ.



ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮಸೂದೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡುವುದನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಆಧಿಕ್ಷೇಪಿಸಿ ಕಾಲ ಮಿತಿ ವಿಧಿಸಿತ್ತು. ಅದರಂತೆ ಇದೀಗ ರಾಷ್ಟ್ರಪತಿಗಳು ಮಸೂದೆಯನ್ನು ವಾಪಸ್‌ ಕಳುಹಿಸಿದ್ದಾರೆ.

ರಾಷ್ಟ್ರಪತಿ ಅಂಕಿತ ನಿರಾಕರಣೆಯು ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುವ ಕೇರಳ ಸರಕಾರದ ಧೋರಣೆಗೆ ತಿರುಗೇಟು ನೀಡಿದಂತಾಗಿದೆ. ಕೇರಳದ ಕನ್ನಡ ಹಾಗೂ ತಮಿಳು ಭಾಷಾ ಅಲ್ಪಸಂಖ್ಯಾತರಿಗೆ ಕಡ್ಡಾಯ ಮಲೆಯಾಳ ಭಾಷೆ ಹೇರಿಕೆ ಮೂಲಕ ಕ್ರಮೇಣ ಭಾಷಾ ಅಲ್ಪಸಂಖ್ಯಾತ ಪದವಿಯನ್ನು ತೆಗೆದುಹಾಕುವ ಹುನ್ನಾರ ಇದಾಗಿತ್ತು. ಇದೀಗ ರಾಷ್ಟ್ರಪತಿ ವಿಧೇಯಕವನ್ನು ಹಿಂದುರುಗಿಸುವ ಮೂಲಕ ಕಡ್ಡಾಯ ಹೇರಿಕೆಗೆ ತಡೆ ನೀಡಿದಂತಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries