HEALTH TIPS

ಕಾರ್ಯಾಚರಣೆ ವಿವರ ನೀಡುವಾಗಲೂ ವಿಭಿನ್ನ ನಡೆ: ಮಹಿಳಾ ಅಧಿಕಾರಿಗಳಿಂದ ಮಾಹಿತಿ

ನವದೆಹಲಿ: 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆಯ ವಿವರಗಳನ್ನು ಮಾಧ್ಯಮಗಳಿಗೆ ತಿಳಿಸಲು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರೊಂದಿಗೆ ರಕ್ಷಣಾ ಇಲಾಖೆಯ ಮಹಿಳಾ ಅಧಿಕಾರಿಗಳಾದ ಕರ್ನಲ್‌ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರನ್ನು ನಿಯೋಜಿಸುವ ಮೂಲಕ ಭಾರತವು ಪಾಕಿಸ್ತಾನದ ಉನ್ನತ ಮಿಲಿಟರಿ ಅಧಿಕಾರಿಗಳು ಪ್ರತಿಪಾದಿಸಿದ 'ಎರಡು ರಾಷ್ಟ್ರ' ಸಿದ್ಧಾಂತಕ್ಕೆ ತಕ್ಕ ತಿರುಗೇಟು ನೀಡಿದೆ.

ಸಾಮಾನ್ಯವಾಗಿ ಇಂತಹ ಸೇನಾ ಕಾರ್ಯಾಚರಣೆಯ ವಿವರಗಳನ್ನು ರಕ್ಷಣಾ ಇಲಾಖೆ ಹಾಗೂ ಸೇನೆಯ ವಕ್ತಾರರು ನೀಡುತ್ತಾರೆ. ರಕ್ಷಣಾ ಇಲಾಖೆ ಹಾಗೂ ವಿದೇಶಾಂಗ ಇಲಾಖೆಯ ಪತ್ರಿಕಾಗೋಷ್ಠಿ ಬೆಳಿಗ್ಗೆ 10ಕ್ಕೆ ನಿಗದಿಯಾಗಿದೆ ಎಂದು ರಕ್ಷಣಾ ಇಲಾಖೆ ಪ್ರಕಟಿಸಿತ್ತು. ಆದರೆ, ಈ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದು ಸೇನೆಯ ಹಿರಿಯ ಅಧಿಕಾರಿಗಳಲ್ಲ. ಬದಲಾಗಿ, ಇಬ್ಬರು ಮಹಿಳಾ ಅಧಿಕಾರಿಗಳು. ಇಬ್ಬರೂ ಏಕ ಕಂಠದಿಂದ ಸೇನಾ ಕಾರ್ಯಾಚರಣೆಯ ವಿವರಗಳನ್ನು ಜಗತ್ತಿಗೆ ಸಾರಿದರು.

ಪತ್ರಿಕಾಗೋಷ್ಠಿಗೆ ಮೂವರು ಸದಸ್ಯರ ತಂಡವನ್ನು ಮುನ್ನಡೆಸಿದ ಮಿಸ್ರಿ ಅವರು ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತ ಕುಟುಂಬದಲ್ಲಿ ಜನಿಸಿದರು. ಅವರು 1989ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿದರು. ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಚೀನಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಿಸ್ರಿ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿ 2024ರ ಜುಲೈನಲ್ಲಿ ನೇಮಿಸಲಾಗಿತ್ತು. ಅವರ ಅವಧಿಯನ್ನು ಡಿಸೆಂಬರ್‌ನಲ್ಲಿ ಒಂದು ವರ್ಷ ವಿಸ್ತರಿಸಲಾಯಿತು.

ಏಪ್ರಿಲ್‌ 16ರಂದು ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, 'ಹಿಂದೂಗಳು ಮತ್ತು ಮುಸ್ಲಿಮರು ವಿಭಿನ್ನ ರಾಷ್ಟ್ರಗಳು' ಎಂದು ಹೇಳಿದ್ದರು. ಕಾಶ್ಮೀರವು ಪಾಕಿಸ್ತಾನದ ಭಾಗ ಎಂದು ಪುನರುಚ್ಚರಿಸಿದ್ದರು.

ತನ್ನ ನೆಲದಲ್ಲಿ ಭಾರತ ನಡೆಸಿದ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯಿಸಲು ಪಾಕಿಸ್ತಾನ ಇಬ್ಬರು ಜನರಲ್‌ಗಳನ್ನು ನಿಯೋಜಿಸಿತು. ಆದರೆ, ಭಾರತ ಇದಕ್ಕಿಂತ ಭಿನ್ನ ನಡೆ ಇಟ್ಟಿತು. ಕಾರ್ಯಾಚರಣೆಯ ವಿವರ ನೀಡುವ ಹೊಣೆಯನ್ನು ರಕ್ಷಣಾ ಇಲಾಖೆಯ ಇಬ್ಬರು ಮಹಿಳಾ ಅಧಿಕಾರಿಗಳಿಗೆ ನೀಡಿತು.

ಕರ್ನಲ್‌ ಖುರೇಷಿ ಅವರು ಕೋರ್‌ ಆಫ್‌ ಸಿಗ್ನಲ್‌ನ (ಮಿಲಿಟರಿ ಸಂವಹನ) ಮೊದಲ ಮಹಿಳಾ ಅಧಿಕಾರಿ. 2006ರಲ್ಲಿ ಕಾಂಗೋದಲ್ಲಿ ನಡೆದ ಭಾರತದ ಕಾರ್ಯಾಚರಣೆ ಸೇರಿದಂತೆ ಅಂತರರಾಷ್ಟ್ರೀಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಅವರು ದೀರ್ಘ ಅನುಭವ ಹೊಂದಿದ್ದಾರೆ.

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು 2,500 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಹೊಂದಿರುವ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಪೈಲಟ್ ಆಗಿದ್ದಾರೆ. ಅವರು ಪ್ರಮುಖ ರಕ್ಷಣಾ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದಾರೆ. ಪ್ರಸ್ತುತ ದೆಹಲಿಯ ವಾಯುಪಡೆಯ ಪ್ರಧಾನ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ಸೇನೆ ಸೇರಬೇಕೆಂದು ಕನಸು ಕಂಡವರು ಅವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries