ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ಟೋಲ್ ಗೇಟ್ ಅಳವಡಿಸುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಜನಪರ ಪ್ರತಿಭಟನೆಯ ಮೂಲಕ ವಿರೋಧಿಸುವುದಾಗಿ ಕ್ರಿಯಾ ಸಮಿತಿ ಅಧ್ಯಕ್ಷ, ಶಾಸಕ ಎ.ಕೆ.ಎಂ. ಅಶ್ರಫ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 66ರ ತಲಪ್ಪಾಡಿಯಲ್ಲಿ ಟೋಲ್ ಗೇಟ್ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಂದ 20 ಕಿ.ಮೀ ದೂರದಲ್ಲಿರುವ ಕುಂಬಳೆಯಲ್ಲಿ ಇನ್ನೊಂದು ಟೊಲ್‍ಗೇಟ್ ನಿರ್ಮಣದಿಂದ ಜನತೆಗೆ ಹೆಚ್ಚಿನ ಸಂಕಷ್ಟ ಎದುರಾಗಲಿದೆ. ಒಂದು ಟೋಲ್‍ಗೇಟ್‍ನಿಂದ ಇನ್ನೊಂದಕ್ಕೆ 60ಕಿ.ಮೀ ಅಂತರವಿರಬೇಕೆಂಬ ಮಾನದಂಡ ಇಲ್ಲಿ ಪಾಲನೆಯಾಗಿಲ್ಲ. 60 ಕಿ.ಮೀ ಒಳಗೆ ಮತ್ತೊಂದು ಟೋಲ್‍ಗೇಟ್ ಮೂಲಕ ಹಣ ಸಂಗ್ರಹಿಸುವುದಿಲ್ಲ ಎಂಬುದಾಗಿ ಕೇಂದ್ರ ಸಾರಿಗೆ ಸಚಿವರು ಸಂಸತ್ತಿನಲ್ಲಿ ನೀಡಿರುವ ಘೋಷಣೆಗೆ ಇದು ವಿರುದ್ಧವಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ತಲಪ್ಪಾಡಿಯಿಂದ ಚೆರ್ಕಳ ವರೆಗಿನ ಮೊದಲ ರೀಚ್ ಕೆಲಸ ಪೂರ್ಣಗೊಂಡಿದೆ ಮತ್ತು ಎರಡನೇ ರೀಚ್ ಕೆಲಸ ಪೂರ್ಣಗೊಳ್ಳದ ಕಾರಣ ಕುಂಬಳೆಯಲ್ಲಿ ಟೋಲ್ ಸಂಗ್ರಹ ತಾತ್ಕಾಲಿಕವಾಗಿರುವುದಾಗಿ ಎನ್‍ಎಚ್‍ಎಐ ಅಧಿಕಾರಿಗಳ ಹೇಳಿಕೆ ವಿಶ್ವಾಸಾರ್ಹವಲ್ಲ. ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳ ಜನರು ಉದ್ಯೋಗ, ವ್ಯಾಪಾರ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಇತ್ಯಾದಿ ಕಾರ್ಯಗಳಿಗೆ ಮುಖ್ಯವಾಗಿ ಮಂಗಳೂರನ್ನು ಅವಲಂಬಿಸಿರುತ್ತಾರೆ. ಇಲ್ಲಿಂದ ಮಂಗಳೂರಿಗೆ ತಲುಪಲು 50ಕಿ.ಮೀ ದೂರವಿದ್ದು, ನಾವು ಎರಡು ಸ್ಥಳಗಳಲ್ಲಿ ಟೋಲ್ ಪಾವತಿಸಬೇಕಾಗುತ್ತದೆ. ಇದು ಸ್ಥಳೀಯ ನಿವಾಸಿಗಳಿಗೆ ತೊಂದರೆ ಮತ್ತು ಆರ್ಥಿಕ ಹೊರೆಯನ್ನುಂಟು ಮಾಡುತ್ತದೆ. ಕುಂಬಳೆ ನಗರದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಟೋಲ್ ಗೇಟ್ ಅಳವಡಿಸಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೂ ತೀವ್ರ ತೊಂದರೆಯಾಗಲಿದೆ.
ಅನ್ಯಾಯದ ಟೋಲ್ ಸಂಗ್ರಹವನ್ನು ಎದುರಿಸಲು ಸಾರ್ವಜನಿಕರು, ಜನ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ವ್ಯಾಪಾರಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ಒಳಗೊಂಡ ಕ್ರಿಯಾ ಸಬಮಿತಿಯನ್ನು ರಚಿಸಲಾಗಿದೆ. ಟೋಲ್ ಗೇಟ್ ಸ್ಥಾಪನೆಯನ್ನು ಜನಪರ ಪ್ರತಿಭಟನೆಯ ಮೂಲಕ ವಿರೋಧಿಸಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಕುಂಬಳೆಯಲ್ಲಿ ಟೋಲ್ ಗೇಟ್ ಸ್ಥಾಪಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಾಸಕರು ಮತ್ತು ಗ್ರಾಮ ಪಂಚಾಯಿತಿಗೆ ಅಧಿಕಾರ ನೀಡಿರುವುದಗಿ ಕೆಲವೊಮದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಜನರಲ್ಲಿ ಗೊಂದಲ ಸೃಷ್ಟಿಸಲಿರುವ ತಂತ್ರವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಚಾಲಕಿ, ಕುಂಬಳೆ ಗ್ರಾಪಂ ಅದ್ಯಕ್ಷೆ ತಾಹಿರಾ ಯೂಸುಫ್, ಅಶ್ರಫ್ ಕಾರ್ಲ, ನಾಸರ್ ಮೊಗ್ರಾಲ್, ಬಿ.ಎ.ರಹಮಾನ್ ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಸಿ.ಎ.ಸುಬೈರ್, ವಿ.ವಿ.ರಮೇಶನ್, ಲಕ್ಷ್ಮಣ ಪ್ರಭು, ಅಹಮ್ಮದಾಲಿ ಕುಂಬಳೆ, ತಾಜುದ್ದೀನ್ ಮೊಗ್ರಾಲ್, ನಾಸರ್ ಬಂಬ್ರಾಣ ಉಪಸ್ಥಿತರಿದ್ದರು.




