HEALTH TIPS

ಸೀತಾಂಗೋಳಿಯಲ್ಲಿ ಮೇಳೈಸಿದ ಕನ್ನಡ ಸಂಸ್ಕøತಿ ಉತ್ಸವ-ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ-ಕನ್ನಡ ಭಾಷೆ ಸಂಸ್ಕøತಿಗೆ ಕಾಸರಗೋಡಿನ ಕೊಡುಗೆ ಅಪಾರ-ಕರ್ನಾಟಕ ಕೃಷಿ ಸಚಿವ ಎಸ್.ಚೆಲುವರಾಯ ಸ್ವಾಮಿ

ಕುಂಬಳೆ: ಸಮಾಜದ ಆಗುಹೋಗುಗಳನ್ನು ವಿಶ್ಲೇಷಣಾತ್ಮಕವಾಗಿ ಕಾಣುವ ಪತ್ರಕರ್ತರು ಸಮಾಜದ ಕಣ್ಣು. ಪತ್ರಕರ್ತರ ಬರಹಗಳ ಮೂಲಕ ಪ್ರತಿಬಿಂಬಿತವಾಗುವ ಸಮಾಜದ ನೋಟಗಳು ವ್ಯವಸ್ಥೆಯ ಕೇವಲ ವರ್ತಮಾನಗಳಾಗಿರದೆ ತಪ್ಪಿರುವ ಹಾದಿಗಳ ಸಮಗ್ರ ಚಿತ್ರಣಗಳಾಗಿದ್ದು, ಆ ಚಿತ್ರಣ ನೀಡುವ ಪತ್ರಕರ್ತರು ಸಮಾಜ ಶಿಲ್ಪಿಗಳು ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರಿಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು. 


ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿಪ್ರದೇಶಾಭಿವೃದ್ದಿ ಪ್ರಾಧಿಕಾ ಬೆಂಗಳೂರು, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳುರು ಇವುಗಳ ಸಂಯುಕ್ತ ಆಶ್ರಯದಲ್ಲಿ  ಶನಿವಾರ ಸೀತಾಂಗೋಳಿಯ ಅಲಯನ್ಸ್ ಕನ್ವೆನ್ಶನ್ ಸೆಂಟರ್  ನಲ್ಲಿ ನಡೆದ  ನಾಲ್ಕನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ  ಸಂಸ್ಕøತಿ ಉತ್ಸವದ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಅನುಗ್ರಮ ಸಂದೇಶ ನೀಡಿದರು.  

ಕಾರ್ಯಕ್ರಮವನ್ನು ನಗಾರಿ ಬಾರಿಸಿ ಸಾಂಪ್ರಾಯಿಕ ಶ್ಯೆಲಿಯಲ್ಲಿ ಉದ್ಘಾಟಿಸಿದ ಕರ್ನಾಟಕ ಸರ್ಕಾರದ ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ ಅವರು ಮಾತನಾಡಿ, ಬಹುಭಾಷಾ ನೆಲೆಗಟ್ಟಿನ ಕಾಸರಗೋಡಲ್ಲಿ ಕನ್ನಡವನ್ನು ಇನ್ನೂ ಕಾಪಿಟ್ಟು ಬೆಂಬಲಿಸುತ್ತಿರುವುದು ಸ್ತುತ್ಯರ್ಹವಾಗಿದ್ದು, ಪತ್ರಕರ್ತರ ಕೊಡುಗೆಯೂ ಮಹತ್ವಪೂರ್ಣವಾದುದು. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಡಿನಾಡು ಕಾಸರಗೋಡಿನ ಅಪೂರ್ವ ಕಾಳಜಿ ಪ್ರೇರಣದಾಯಿ. ಭಾಷೆ, ಸಂಸ್ಕೃತಿಗೆ ಪತ್ರಿಕೆಗಳು ನೀಡುತ್ತಿರುವ ಜವಾಬ್ದಾರಿಯುತ ಕಾಳಜಿಯೇ ಕನ್ನಡ ಶುದ್ದ ಸುಂದರವಾಗಿ ಉಳಿದುಕೊಂಡಿರಲು ಕಾರಣವಾಗಿದೆ ಎಂದವರು ತಿಳಿಸಿದರು. 


ಭಾರತೀಯ ಪರಂಪರೆ, ಸ್ವಾತಂತ್ರ್ಯ ಸಂಗ್ರಾಮ, ಕನ್ನಡ ಏಕೀಕರಣ,ವಿಲೀನೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕವಿ ಕಯ್ಯಾರರು, ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳಾದಿಯಾಗಿ ಪ್ರಮುಖ ನಾಯಕರು, ಚಿಂತಕರು ಕಾಸರಗೋಡಿನ ಸಂಸ್ಕøತಿ ಸಂವರ್ಧನೆಗೆ ನೀಡಿರುವ ಅವಿಸ್ಮರಣೀಯ ಕೊಡುಗೆಗಳು ನಾಡು ನುಡಿಗೆ ಸಂದ ಅತ್ಯಪೂರ್ವ ಕಾಣ್ಕೆಗಳಾಗಿದ್ದು, ಇವೇ ಕಾರಣಗಳಿಂದ ಕರ್ನಾಟಕ ಗಡಿನಾಡು ಕಾಸರಗೋಡಿನ ಬಗ್ಗೆ ಈಗಲೂ ಗೌರವಪೂರ್ಣವಾಗಿ ನಡೆದುಕೊಳ್ಳುತ್ತಿದೆ. ಸವಾಲುಗಳಿಗೆ ಧ್ವನಿಯಾಗಿ ಕರ್ನಾಟಕ ಸರ್ಕಾರ ಬೆನ್ನಿಗಿದೆ ಎಂದವರು ತಿಳಿಸಿದರು.   

ಉದ್ಯಮಿ ಹಾಗೂ ಸ್ವಾಗತ ಸಮಿತಿ ಗೌರವಾಧ್ಯಕ್ಷ ಕೆ.ಕೆ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಗ್ದ, ನಿರ್ಮಲ ಹೃದಯದವರಾದ ಕಾಸರಗೋಡಿನ ಕನ್ನಡಿಗರು ಅನ್ಯರಲ್ಲ ಎಂಬುದಕ್ಕೆ ಕರ್ನಾಟಕದ ಸಚಿವರಾದಿಯಾಗಿ ಪತ್ರಕರ್ತರ ಸಂಘಟನೆ ಮುನ್ನಡೆಸುತ್ತಿರುವ ಅಅಹರ್ನಿಶಿ ಕಾರ್ಯಕ್ರಮಗಳು ಸಾಕ್ಷಿಯಾಗಿದೆ. ವ್ಯಕ್ತಿ-ಸಮಾಜಗಳ ಪ್ರತಿಯೊಂದು ಬೆಳವಣಿಗೆಗಳ ಹಿಂದೆಯೂ ಅವರನ್ನೆತ್ತಿ ಮುನ್ನಡೆಸುವ ಚಾಲಕ ಶಕ್ತಿ ಪತ್ರಕರ್ತರು ಎಂದವರು ಬಣ್ಣಿಸಿದರು.

ಈ ಸಂದರ್ಭ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹಾಗೂ ಡಾ. ರೋಹಹನ್ ಮೊಂತೇರೋ ಮಂಗಳೂರು ಅವರಿಗೆ ಪೌರಸನ್ಮನ ನೀಡಿ ಗೌರವಿಸಲಾಯಿತು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕರ್ನಾಟಕ ಗಡಿಪ್ರದೇಶಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಎ.ಆರ್.ಸುಬ್ಬಯ್ಯಕಟ್ಟೆ, ಸಂಜೀವ ಕುಮಾರ್ ಅತಿವಾಳೆ, ಶಿವರೆಡ್ಡಿ ಖ್ಯಾಡೆದ್ ಗೌರವ ಉಪಸ್ಥಿತರಿದ್ದರು. ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ, ಬ್ಲಾ.ಪಂ.ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ಬದಿಯಡ್ಕ ಗ್ರಾ.ಪಂ.ಸದಸ್ಯ ಶಂಕರ ಡಿ., ಗಡಿನಾಡ ಸಾಹಿತ್ಯ-ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ, ಟಿ.ಎಂ.ಶಹೀದ್, ಕಾರ್ತಿಕ್ ಶೆಟ್ಟಿ ಸೊಯ್ವಕಲ್ಲು ಉಪಸ್ಥಿತರಿದ್ದರು. 

ಈ ಸಂದರ್ಭ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ, ಜಯಂತ ಪಾಟಾಳಿ, ಡಾ.ಎಸ್.ಯು.ಅಬ್ದುಲ್ಲ, ಡಿ.ಶಂಕರ, ಫಿಯಾದ ಕ್ರಾಸ್ತಾರಿಗೆ ಸಾಧಕ ಅಭಿನಂದನೆ ನಡೆಯಿತು. ಪತ್ರಕರ್ತರಾದ ಶ್ರೀನಿವಾಸ ಜೋಕಟ್ಟೆ, ಗಣೇಶ್ ಕಾಸರಗೋಡು, ಮೊಹಮ್ಮದ್ ಅನ್ಸಾರ್ ಇನೋಳಿ, ವೇಣುವಿನೋದ್ ಕೆ.ಎಸ್., ಸತ್ಯವತಿ ಮಂಗಳೂರು, ಇಕ್ಬಾಲ್ ಕುತ್ತಾರ್, ಕಡಂಕೆರೆ ಇಸ್ಮಾಯಿಲ್ ಕೊಡಗು, ರಾಮ ಅಜೆಕ್ಕಾರ್, ಗಣೇಶ್ ಕೆ.ಕಾಸರಗೋಡು, ಭಾಸ್ಕರ ಕೆ. ಕಾಸರಗೋಡು ಹಾಗೂ ಅಜಿತ್ ಸ್ವರ್ಗ ಅವರಿಗೆ ವಿವಿಧ ದತ್ತಿನಿಧಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಈ ಸಂದರ್ಭ ನೂತನವಾಗಿ ಆರಂಭಿಸಲಾದ ನಿವೃತ್ತ ಪತ್ರಕರ್ತರಿಗಿರುವ ಪಿಂಚಣಿಗೆ ವಿತರಣೆಗೆ ಶಿವಾನಂದ ತಗಡೂರು ಚಾಲನೆ ನೀಡಿದರು. ಮಲಾರ್ ಜಯರಾಮ ರೈ, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಹಾಗೂ ಅಚ್ಚುತ ಚೇವಾರ್ ಅವರಿಗೆ ಪಿಂಚಣಿ ಪತ್ರ ವಿತರಿಸಲಾಯಿತು.


ಇದಕ್ಕೂ ಮೊದಲು ಬೆಳಿಗ್ಗೆ ಸೀತಾಂಗೋಳಿ ಪೇಟೆಯಿಂದ ಸಂಸ್ಕøತಿ ಉತ್ಸವ ನಗರಕ್ಕೆ ಸಂಸ್ಕøತಿ ಶೋಭಾಯಾತ್ರೆ ಸಿಂಗಾರಿ ಮೇಳ, ಡೋಲು-ನಗಾರಿ, ವೀರಗಾಸೆಗಳೊಂದಿಗೆ ಆಗಮಿಸಿತು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಿವಶಂಕರ ನೆಕ್ರಾಜೆ ನಗಾರಿ ಬಾರಿಸಿ ಚಾಲನೆ ನೀಡಿದರು. ಪ್ರಧಾನ ಸಂಚಾಲಕ ನ್ಯಾಯವಾದಿ ಥೋಮಸ್ ಡಿಸೋಜ, ಸಂಚಾಲಕ ರಾಮಪ್ಪ ಮಂಜೇಶ್ವರ, ಡಿ.ಕೃಷ್ಣದಾಸ್, ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಕೋಶಾಧಿಕಾರಿ ಕೆ.ಶ್ರೀಕಾಂತ್ ನೆಟ್ಟಣಿಗೆ, ಅಖಿಲೇಶ್ ನಗುಮುಗಂ, ರವಿ ನಾಯ್ಕಾಪು, ರಾಜೇಶ್ ಕುದ್ರೆಪ್ಪಾಡಿ, ಗಂಗಾಧರ ತೆಕ್ಕೆಮೂಲೆ, ಪವನ್ ಕುಮಾರ್, ಅಪ್ಪಣ್ಣ ಸೀತಾಂಗೋಳಿ, ಮಹಾಲಿಂಗ ಕೆ, ರಚನಾ ಕುದ್ರೆಪ್ಪಾಡಿ, ಸಂತೋಷ್ ಆಟ್ರ್ಸ್-ಸ್ಪೋಟ್ಸ್ ಕ್ಲಬ್ ಸೀತಾಂಗೋಳಿ ಸಹಕರಿಸಿದರು.

ಕೆ.ಎನ್.ನಾಗೇಶ್ ಬೆಂಗಳೂರು ನಾಡಗೀತೆ ಹಾಡಿದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಪ್ರಾರ್ಥನಾಗೀತೆ ಹಾಡಿದರು. ನ್ಯಾಯವಾದಿ ಥೋಮಸ್ ಡಿಸೋಜ ಸ್ವಾಗತಿಸಿ, ರವಿ ನಾಯ್ಕಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ತೆಕ್ಕೆಮೂಲೆ ವಂದಿಸಿದರು. ರಫೀಕ್ ಮಾಸ್ತರ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. 

ಏಕಪಾತ್ರಾಭಿನಯ, ಯಕ್ಷನೃತ್ಯ, ಕೈಕೊಟ್ಟು ನೃತ್ಯ, ತಿರುವಾದಿರ, ಶಾಸ್ತ್ರೀಯ ನೃತ್ಯ, ನಾಟ್ಯ ವೈಭವ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries