ಇಂಫಾಲ್: ಮಣಿಪುರದ ಇಂಫಾಲ್‌ನಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ನಾಲ್ವರು ಬಂಡುಕೋರರನ್ನು ಭದ್ರತಾ ಪಡೆಗಳು ಬಂಧಿಸಿವೆ. ಪೂರ್ವ ಮತ್ತು ಪಶ್ಚಿಮ ಇಂಫಾಲ್ ಮತ್ತು ತೌಬಲ್ ಜಿಲ್ಲೆಗಳಲ್ಲಿ ಬಂಧಿತರು ಸುಲಿಗೆ ಮತ್ತು ಹೊಸ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಕಾಂಗಲೇಯಿಪಾಕ್ ಕಮ್ಯುನಿಸ್ಟ್ ಪಾರ್ಟಿ(ಪಿಡಬ್ಲ್ಯುಜಿ), ಕೆವೈಕೆಎಲ್, ಯುಎನ್‌ಎಲ್‌ಎಫ್, ಪೀಪಲ್ಸ್ ಲಿಬರೇಷನ್ ಆರ್ಮಿಯ(ಪಿಎಲ್‌ಎ) ತಲಾ ಒಬ್ಬರು ಸದಸ್ಯರನ್ನು ಸ್ಫೋಟಕಗಳ ಸಮೇತ ಶನಿವಾರ ಬಂಧಿಸಲಾಗಿದೆ.
ಮತ್ತೊಂದೆಡೆ ಬಿಷ್ಣುಪುರ ಜಿಲ್ಲೆಯ ಕುಂಬಿ ಸೇತುಪುರದ ತಪ್ಪಲಿನಲ್ಲಿ ನಡೆದ ಶೋಧದಲ್ಲಿ ಮೂರು ಬಂದೂಕು, ಒಂದು 9 ಎಂಎಂ ಪಿಸ್ತೂಲು, ಐದು ಸ್ಫೋಟಕಗಳು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.





