ಕಾಸರಗೋಡು: ವಿದ್ಯಾನಗರದ ಸಿವಿಲ್‍ಸ್ಟೇಶನ್ ವಠಾರದಲ್ಲಿ ಕಾರ್ಯಾಚರಿಸುತ್ತಿರುವ ಕಾಸರಗೋಡು ಜಿಲ್ಲಾ ಪಂಚಾಯಿತಿ ಕಚೇರಿ ವಠಾರದಲ್ಲಿ ತ್ಯಾಜ್ಯ ವಸ್ತುಗಳಿಂದ ನಿರ್ಮಿಸಿರುವ ಬಿಳಿ ಹೊಟ್ಟೆಯ ಬೃಹತ್ ಗಾತ್ರದ ಗರುಡನ ಪ್ರತಿರೂಪವೊಂದು ಜನಾಕರ್ಷಣೆಗೆ ಕಾರಣವಾಗುತ್ತಿದೆ.
ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಕಾಸರಗೋಡು ವತಿಯಿಂದ ಆಯೋಜಿಸಲಾಗುತ್ತಿರುವ ಸ್ವಚ್ಛತಾ ಸಮಾವೇಶದ ಪ್ರಚಾರಾರ್ಥ ಈ ಕಡಲು ಗಿಡುಗದ ಪ್ರತಿರೂಪ ನಿರ್ಮಿಸಲಾಗಿದೆ.
ಕಾಸರಗೋಡು ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಆಗಮಿಸುವವರಿಗೆ ಬೃಹತ್ ಗಾತ್ರದ ಈ ಸುಂದರ ಗಿಡುಗ ತನ್ನ ರೆಕ್ಕೆ ಬಿಚ್ಚಿ ಸ್ವಾಗತ ಕೋರುತ್ತಿದೆ. ತ್ಯಾಜ್ಯ ವಸ್ತುಗಳನ್ನು ಮಾತ್ರ ಬಳಸಿಕೊಂಡು ಈ ಸುಂದರ ಪ್ರತಿರೂಪ ನಿರ್ಮಿಸಲಾಗಿದೆ. ಶಿಲ್ಪಿ, ವೆಳ್ಳಚ್ಚಾಲ್ ನಿವಾಸಿ ಎ.ಜಿ. ನಾರಾಯಣನ್ ಈ ಸುಂದರ ಕಲಾಕೃತಿ ನಿರ್ಮಿಸಿದ್ದಾರೆ. ಉಪಯೋಗಶೂನ್ಯ ಕಬ್ಬಿಣದ ಸಲಾಕೆಗಳಿಂದ ಗಿಡುಗನ ದೇಹರಚನೆ ಮಾಡಲಾಗಿದ್ದು, ಗಿಡುಗನ ತಲೆ ನಿರ್ಮಾಣಕ್ಕೆ ಹಳೇ ಹೆಲ್ಮೆಟ್ ಬಳಸಲಾಗಿದೆ. ಹಳೇ ಪಿವಿಸಿ ಪೈಪ್‍ಗಳಿಂದ ಕೊಕ್ಕು, ಸಣ್ಣ ಪ್ಲಾಸ್ಟಿಕ್ ಬಾಟಲಿಗಳಿಂದ ಕಣ್ಣು, ಸಾಬೂನಿನ ಹೊದಿಕೆಗಳಿಂದ ನಾಲಿಗೆ, ಥರ್ಮೋಕೋಲ್ ಬಳಸಿ ಗಿಡುಗನ ಗರಿಯೊಂದಿಗೆ ರೆಕ್ಕೆ ತಯಾರಿಸಲಾಗಿದೆ. ಒಟ್ಟಿನಲ್ಲಿ ತ್ಯಾಜ್ಯ ವಸ್ತುಗಳಿಂದ ಸುಂದರ ಪ್ರತಿರೂಪ ನಿರ್ಮಿಸುವ ಮೂಲಕ ಎಸೆಯುವ ವಸ್ತುಗಳನ್ನು ಮರುಬಳಕೆ ಮಾಡಬಹುದೆಂಬ ಸಂದೇಶವನ್ನೂ ಈ ಕಲಾಕೃತಿಯಲ್ಲಿ ತೋರಿಸಲಾಗಿದೆ.
ಹಸಿರು ಕ್ರಿಯಾ ಸೇನೆ ಮತ್ತು ಕಾಸರಗೋಡು ಜಿಲ್ಲಾ ಪಂಚಾಯಿತಿ ಸಹಾಯದಿಂದ ರಚಿಸಲಾಗಿರುವ ಈ ಕಲಾಕೃತಿಗಾಗಿ 2000ದಷ್ಟು ಬಳಕೆಯಾಗದ ಪ್ಲಾಸ್ಟಿಕ್ ಬಾಟಲಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಬಿಳಿ ಹೊಟ್ಟೆಯ ಗಿಡುಗ ಮಾಹೆಯಿಂದ ಮಂಜೇಶ್ವರದವರೆಗಿನ ಕರಾವಳಿ ಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ಪಕ್ಷಿಯಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ ಒಂದರಲ್ಲಿ ಅಳವಡಿಸಲಾಗಿರುವ ಈ ಕಡಲು ಗಿಡುಗವನ್ನು 2023 ರಲ್ಲಿ ಕಾಸರಗೋಡಿನ ಜಿಲ್ಲಾ ಪಕ್ಷಿಯಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಘೋಷಿಸಿದೆ. ಜೈವ ವೈವಿಧ್ಯ ಸಂರಕ್ಷಣಾ ಅಭಿಯಾನದ ಅಂಗವಾಗಿ ಈ ಘೋಷಣೆ ಮಾಡಲಾಗಿದ್ದು, ಇದರ ಸಂಕೇತವಾಗಿ ಪ್ರತಿರೂಪ ನಿರ್ಮಿಸಲಾಗಿದೆ.






