ಕಾಸರಗೋಡು: ಕನ್ನಡ ಸಾಹಿತ್ಯ ಚರಿತ್ರೆಗೆ ವಿಶಿಷ್ಟ ಜ್ಞಾನಪೀಠ ಪ್ರಶಸ್ತಿಯೊದಗಿಸಿದ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದ ಕುವೆಂಪು ಅವರ ಮೇರು ಕೃಇ ರಾಮಾಯಣ ದರ್ಶನಂ ಮಹಾಕಾವ್ಯ ಇದೀಗ ಮಲೆಯಾಳಂ ಗೆ ಭಾಷಾಂತರದೊಂಡು ಮುದ್ರಣಕ್ಕೆ ಸಿದ್ದಗೊಂಡಿದೆ.
ಕಾಸರಗೋಡು ಜಿಲ್ಲೆಯ ಕಾಞಂಗಾಡು ನಿವಾಸಿ, ಕಣ್ಣೂರು ವಿಶ್ವವಿದ್ಯಾನಿಲಯದ ಬಹುಭಾಷಾ ಅಧ್ಯಯನ ಕೇಂದ್ರದ ಮುಖ್ಯಸ್ಥ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರೂ ಆಗಿರುವ ಡಾ.ಎ.ಎನ್.ಶ್ರೀಧರನ್ ಈ ಮಹಾಕಾವ್ಯದ ಮಲೆಯಾಳಂ ಅನುವಾದಕರು.
ವಾಲ್ಮೀಕಿ ರಾಮಾಯಣದ ಕಥಾಹಂದರದ ಮೇಲೆ ಸರ್ವೋದಯ, ಸಮನ್ವಯ ತತ್ವಗಳನ್ನು ಪ್ರತಿಪಾದಿಸಿ ರಚಿತವಾದ ಈ ಕೃತಿ ಕುವೆಂಪು ಸೃಜಿಸಿದ ಮಹಾಕೃತಿಯಾಗಿ ಪ್ರಚಲಿತ. ಈ ವರೆಗೆ ಸಂಸ್ಕøತ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದಗೊಂಡಿರುವ ಈ ಮಹಾಕಾವ್ಯ ಇದೀಗ ಮಲೆಯಾಳಂಗೆ ಅನುವಾದಗೊಂಡಿದೆ. ಸುಮಾರು 650 ಪುಟಗಳ ಕೃತಿಯನ್ನು ನವದೆಹಲಿಯ ಇಂಡಸ್ ಸ್ಕ್ರೋಲ್ ಪಬ್ಲಿಕೇಶನ್ ಪ್ರಕಟಿಸಲಿದೆ. ಕೇವಲ 9 ತಿಂಗಳಲ್ಲಿ ಅನುವಾದ ಪೂರ್ಣಗೊಳಿಸಲಾಗಿದೆ.
ಡಾ.ಎನ್.ಶ್ರೀಧರನ್:
ಅನುವಾದಕ ಡಾ.ಎ.ಎನ್.ಶ್ರೀಧರನ್ ಅವರು ಮಲೆಯಾಳಿಯಾದರೂ ಕನ್ನಡ-ತುಳು ಭಾಷೆಗಳ ಮೇಲೆ ಅಪಾರ ಅಭಿಮಾನ ಹೊಂದಿದವರು. ಅವರು ಈಗಾಗಲೇ 1932 ರಿಂದ ಲಭ್ಯವಾಗುವ ತುಳು ಭಾಷೆಯ ಕಥೆಗಳನ್ನು ಸಂಗ್ರಹಿಸಿ ಕಥಾ ಕದಿಗೆ ಹೆಸರಲ್ಲಿ ಮಲೆಯಾಳಂಗೆ ಭಾಷಾಂತರಿಸಿದ್ದು ಇದಕ್ಕೆ 2023ರ ಕೇರಳ ಸರ್ಕಾರ ನೀಡುವ ಸಾಹಿತ್ಯ ಪುರಸ್ಕಾರ ಲಭಿಸಿತ್ತು. ಅಲ್ಲದೆ ಸತಿ ಕಮಲ, ಡಿ.ಕೆ.ಚೌಟರ ಮಿತ್ತಬೈಲು ಯಮುನಕ್ಕ, ತುಳು-ಮಲೆಯಾಳಂ, ಬ್ಯಾರಿ-ಮಲೆಯಾಳಂ ನಿಘಂಟು, ಸಹಿತ ವಿವಿಧ ಕೃತಿಗಳನ್ನು ಬರೆದಿದ್ದಾರೆ.
ಅಭಿಮತ:
ಕುವೆಂಪು ಅವರ ಹಲವು ಕವನ-ಚುಟುಕುಗಳನ್ನು ಓದುತ್ತಿದ್ದಾಗ ರಾಮಾಯಣ ದರ್ಶನಂ ಕಾವ್ಯದ ಬಗ್ಗೆ ಆಸಕ್ತಿ ಹುಟ್ಟಿತು. ಅದನ್ನು ಓದುತ್ತಿರುವಂತೆ ತನ್ನೊಳಗಿನ ಹಲವು ಗೊಂದಲಗಳಿಗೆ ಉತ್ತರಗಳು ಲಭಿಸುತ್ತಾ ಹೋದವು. ಇಂದಿನ ಹೊಸ ಕಾಲಘಟ್ಟದ ಸಮಾಜಕ್ಕೆ ಬಹುಹತ್ತಿರವಾದ ರಾಮಾಯಣ ದರ್ಶನಂ ನಿಜವಾಗಿಯೂ ವರ್ತಮಾನ ಓದಲೇ ಬೇಕಾದ ಕಾವ್ಯ. ಅಲ್ಲಿಯ ಮಂಥರೆ, ವಾಲಿ, ರಾವಣ ಮೊದಲಾದವುಗಳು ಮಾಡಿದ ಮಹಾ ಪ್ರಮಾದಗಳನ್ನು ನ್ಯಾಯೀಕರಿಸದೆ ಮಾಡಿದ ತಪ್ಪುಗಳ ಬಗ್ಗೆ ಪಶ್ಚಾತ್ತಾಪದ ಅಗ್ನಿಯಲ್ಲಿ ಸ್ವಯಂ ಹೋಮಿಸಿಕೊಳ್ಳುವ, ಮಾನವ ಮಾಧವನಾಗುವ ಕಥಾನಕ ನಿಜವಾಗಿಯೂ ಮನೆ-ಮನಗಳಿಗೆ ತಲುಪಬೇಕು. ಕೇರಳದ ಜನತೆ ಹೊಸ ರೂಪದ ರಾಮಾಯಣ ಪ್ರಮಾದಗಳನ್ನು ಮೀರಿ ಬೆಳೆಯುವಲ್ಲಿ, ಇಲ್ಲಿಯ ವೈಯಕ್ತಿಕ ಮತ್ತು ರಾಜಕೀಯ ಕೊಲೆ, ರಾಜಕೀಯಗಳನ್ನು ಕೊನೆಗಾಣಿಸಲು ಕಾರಣವಾಗಬೇಕೆಂಬ ಆಶಯ ತನ್ನದು ಎಂದು 'ಸಮರಸ ಸುದ್ದಿ'ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
:






