ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಸ್ಥಿತಿಯನ್ನು ಬಿಎಸ್‌ಎಫ್ ಮಹಾನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ ಪರಿಶೀಲಿಸಿದ್ದಾರೆ. ಅಲ್ಲದೆ ರಾಷ್ಟ್ರದ ಭದ್ರತೆಯನ್ನು ಕಾಪಾಡುವಲ್ಲಿ ನಿರಂತರ ಜಾಗರೂಕತೆ ಮತ್ತು ಸೈನ್ಯದ ಸನ್ನದ್ಧತೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚು ಶೆಲ್ಲಿಂಗ್ ನಡೆಯುವ ಪೂಂಛ್ ಜಿಲ್ಲೆಗೆ ಗುರುವಾರ ಭೇಟಿ ನೀಡಿದ ಅವರು, ಭದ್ರತೆಯನ್ನು ಪರಿಶೀಲನೆ ನಡೆಸಿದ್ದಾರೆ.
'ಜಮ್ಮುವಿನಲ್ಲಿ ಗಡಿ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಮತ್ತು ಬಲಪಡಿಸಲು ಜಮ್ಮುವಿನ ಪ್ರಧಾನ ಕಚೇರಿಯಲ್ಲಿ ಬಿಎಸ್‌ಎಫ್ ಮಹಾ ನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ ಸಭೆ ನಡೆಸಿದರು' ಎಂದು ಬಿಎಸ್‌ಎಫ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಸಭೆಯಲ್ಲಿ ಸದ್ಯದ ಕಾರ್ಯಾಚರಣೆ ತಂತ್ರಗಳು, ಸವಾಲುಗಳ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೆ, ಅಂತರರಾಷ್ಟ್ರೀಯ ಗಡಿಯಲ್ಲಿ ಸದ್ಯದ ಭದ್ರತಾ ಸನ್ನಿವೇಶವನ್ನು ಪರಿಶೀಲನೆ ನಡೆಸಿದರು ಎಂದು ಅದು ತಿಳಿಸಿದೆ.
ಮುಂಬರುವ ಅಮರನಾಥ ಯಾತ್ರೆಯಿಂದಾಗಿ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆಯ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ಅಮರನಾಥ ದೇಗುಲ ಮಂಡಳಿಯ ಪ್ರಕಟಣೆ ಪ್ರಕಾರ, ದಕ್ಷಿಣ ಕಾಶ್ಮೀರದಲ್ಲಿರುವ 3,880 ಮೀಟರ್ ಎತ್ತರದ ಗುಹಾ ದೇವಾಲಯಕ್ಕೆ 38 ದಿನಗಳ ತೀರ್ಥಯಾತ್ರೆ ಜುಲೈ 3 ರಂದು ಪ್ರಾರಂಭವಾಗಿ ಆಗಸ್ಟ್ 9 ರಂದು ಮುಕ್ತಾಯಗೊಳ್ಳಲಿದೆ.
ವಾರ್ಷಿಕ ಅಮರನಾಥ ಯಾತ್ರೆಗಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸುಮಾರು 42,000 ಸಿಬ್ಬಂದಿಯನ್ನು ಒಳಗೊಂಡ 580 ತುಕಡಿಗಳನ್ನು ನಿಯೋಜಿಸಲು ಕೇಂದ್ರವು ಆದೇಶಿಸಿದೆ.




