HEALTH TIPS

Ind-Pak Tension: ಪಾಕ್‌ ಸೇನಾ ವಕ್ತಾರನ ತಂದೆಗೆ ಅಲ್‌ಖೈದಾ ನಂಟು

ನವದೆಹಲಿ: 'ಲೆಫ್ಟಿನೆಂಟ್‌ ಜನರಲ್‌ ಅಹಮ್ಮದ್‌ ಷರೀಫ್‌ ಚೌಧರಿ ಪಾಕಿಸ್ತಾನ ಸೇನೆಯ ವಕ್ತಾರ. ಭಾರತ-ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ಕುರಿತಂತೆ ಮಾಧ್ಯಮಗಳಿಗೆ ನಿರಂತರ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಇವರ ತಂದೆ ಪಾಕಿಸ್ತಾನದ ಪರಮಾಣು ವಿಜ್ಞಾನಿಯಾಗಿದ್ದು, ಅಲ್‌ ಖೈದಾ ಸಂಘಟನೆಯ ಜೊತೆಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಷರೀಫ್‌ ಚೌಧರಿ ಅವರು ಸೇನೆಯಲ್ಲಿ ಜನರಲ್‌ ಹುದ್ದೆಯನ್ನು ಹೊಂದಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ 9 ಉಗ್ರರ ಅಡಗುತಾಣಗಳ ಮೇಲೆ ಭಾರತ ದಾಳಿ ನಡೆಸಿದ್ದ ಕ್ಷಣದಿಂದಲೂ ಸೇನಾ ಕಾರ್ಯಾಚರಣೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಸೇನೆಯ ಅಂತರ್‌ ಸೇವೆಗಳ ಸಾರ್ವಜನಿಕ ಸಂ‍ಪರ್ಕ ವಿಭಾಗದ (ಐಸಿಪಿಆರ್‌) ಮಹಾ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ವಿಶ್ವಸಂಸ್ಥೆಯ ದಾಖಲೆಗಳ ಪ್ರಕಾರ, ಚೌಧರಿ ತಂದೆ ಸುಲ್ತಾನ್‌ ಬಶೀರುದ್ದೀನ್‌ ಮಹಮ್ಮದ್‌ ಅವರು ಅಮೃತರಸಲ್ಲಿ ಜನಿಸಿದ್ದು, ಅಲ್‌ ಖೈದಾ ನಾಯಕ ಒಸಾಮಾ ಬಿನ್‌ ಲಾಡೆನ್‌ನನ್ನು ಭೇಟಿಯಾಗಿದ್ದರು. ಪರಮಾಣು ಶಸ್ತ್ರಾಸ್ತ್ರ ಯೋಜನೆ, ಅವುಗಳ ತಯಾರಿಕೆಗೆ ಬೇಕಾದ ಅಗತ್ಯ ಮೂಲಸೌಕರ್ಯ, ಪರಿಣಾಮಗಳ ಕುರಿತು ಅಲ್‌ ಖೈದಾ ಸಂಘಟನೆಗೆ ವಿವರಗಳನ್ನು ಒದಗಿಸಿದ್ದ ಆರೋಪಕ್ಕೆ ಗುರಿಯಾಗಿದ್ದರು. ಇದೇ ಆರೋಪದ ಮೇಲೆ 2001ರಲ್ಲಿ ಬಂಧನಕ್ಕೊಳಗಾಗಿ ನಂತರ ಬಿಡುಗಡೆಯಾಗಿದ್ದರು.

ಇದಲ್ಲದೇ, 1999ರಲ್ಲಿ ಜನ್ಮತಾಳಿದ ಮೂಲಭೂತವಾದಿ ಸಂಘಟನೆ 'ಉಮ್ಮಾ ತಮೀರ್-ಎ-ನೌ'ಗಾಗಿ ದೇಣಿಗೆ ಸಂಗ್ರಹಿಸಿದ ಆರೋಪಕ್ಕೆ ಗುರಿಯಾಗಿದ್ದರು. ಪಾಕಿಸ್ತಾನದ ಅಣುಶಕ್ತಿ ಆಯೋಗದಲ್ಲಿ ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಧರ್ಮ ಹಾಗೂ ವಿಜ್ಞಾನವನ್ನು ಸಮೀಕರಿಸಿದ ದೃಷ್ಟಿಕೋನದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದರು. 'ಮೆಕ್ಯಾನಿಕ್ಸ್‌ ಆಫ್‌ ಡೂಮ್ಸ್‌ಡೇ ಆಯಂಡ್‌ ಲೈಫ್‌ ಆಫ್ಟರ್‌ ಡೆತ್‌' ಹೆಸರಿನ ಕೃತಿ ಅವುಗಳಲ್ಲಿ ಒಂದು.

85 ವರ್ಷದ ಸುಲ್ತಾನ್‌ ಬಶೀರುದ್ದೀನ್‌ ಮಹಮ್ಮದ್‌ ಈಗ ಇಸ್ಲಾಮಾಬಾದಿನಲ್ಲಿ ನೆಲಸಿದ್ದಾರೆ. ಇವರ ಪುತ್ರ ಚೌಧರಿ 2022ರಿಂದ ಐಸಿಪಿಆರ್‌ ಮಹಾ ನಿರ್ದೇಶಕರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries