ತಿರುವನಂತಪುರಂ: ಕೇಂದ್ರ ಸರ್ಕಾರದ ಯೋಜನೆಯನ್ನು ವಿರೊಧಿಸಿದ ಕಾರಣ 1,500 ಕೋಟಿ ರೂ. ಅನುದಾನವನ್ನು ತಡೆಹಿಡಿಯಲಾಗಿದೆ ಎಂದು ಕೇರಳ ಸರ್ಕಾರ ಆರೋಪಿಸಿದ್ದು, ತಮಿಳುನಾಡಿನ ರೀತಿಯಲ್ಲೇ ತಾನೂ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಮಂಗಳವಾರ ತಿಳಿಸಿದೆ.
ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಲು ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಅದೇ ಕಾರಣದಿಂದಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ಕೇರಳಕ್ಕೆ ಬರಬೇಕಿದ್ದ 1,500 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಕೇರಳದ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಹೇಳಿದ್ದಾರೆ.
ಜತೆಗೆ ತಮ್ಮ ಹಕ್ಕಿನ ಅನುದಾನವನ್ನು ಪಡೆಯಲು ತಮಿಳುನಾಡಿನ ಸಹಾಯದೊಂದಿಗೆ ನಾವೂ ಸುಪ್ರೀಂ ಕದ ತಟ್ಟುತ್ತೇವೆ. ಈಗಾಗಲೇ ತಮಿಳುನಾಡು ಶಿಕ್ಷಣ ಸಚಿವರ ಬಳಿ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ಈ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆಯ ಮಾರ್ಗವನ್ನೂ ಅನುಸರಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಕೇಂದ್ರವು ಸಮಗ್ರ ಶಿಕ್ಷಾ ಕೇರಳ(ಎಸ್‌ಎಸ್‌ಕೆ) ಅನುದಾನವನ್ನೂ ತಡೆದಿದ್ದಾರೆ. ಕೇಂದ್ರ ಈ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ. ಈಗ ನಮಗೆ ಪ್ರತಿಭಟನೆ ಹಾಗೂ ಕಾನೂನು ಹೋರಾಟ ಹೊರತುಪಡಿಸಿ ಬೇರೆ ಯಾವುದೇ ದಾರಿಯಿಲ್ಲ. ಕೇರಳವನ್ನು ದೇಶದ ಅವಿಭಾಜ್ಯ ಅಂಗ ಎಂಬುದನ್ನು ಪರಿಗಣಿಸಿ, ಕೇಂದ್ರ ನಮ್ಮ ಹಕ್ಕಿನ ಅನುದಾನವನ್ನು ನೀಡಬೇಕು ಎಂದು ಆಗ್ರಹಿಸುತ್ತಿದ್ದೇವೆ ಎಂದು ಶಿವನ್‌ಕುಟ್ಟಿ ಹೇಳಿದ್ದಾರೆ.
ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿಚಾರವಾಗಿ ತಮಿಳುನಾಡು ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು. ಬಳಿಕ ಸುಪ್ರೀಂ ಪೀಠ ತಮಿಳುನಾಡಿನ ಪರ ತೀರ್ಪು ನೀಡಿ, “ಎಲ್ಲ ರಾಜ್ಯಗಳು ಎನ್‌ಇಪಿಯನ್ನು ಜಾರಿ ಮಾಡಲೇಬೇಕು ಎನ್ನುವಂತಹ ಕಡ್ಡಾಯ ನಿಯಮಗಳು ಇಲ್ಲ’ ಎಂದು ಹೇಳಿತ್ತು.
ಏನಿದು ಪ್ರಕರಣ?
ಕೇಂದ್ರ ಸರ್ಕಾರವು ಪಿಎಂಶ್ರೀ ಯೋಜನೆ ಅಡಿಯಲ್ಲಿ ದೇಶದಲ್ಲಿರುವ ವಿವಿಧ ಶಾಲೆಗಳನ್ನು ಆಧುನೀಕರಣಗೊಳಿಸಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಆ ಶಾಲೆಗಳಲ್ಲಿ ಅಳವಡಿಸಲಾಗುತ್ತದೆ. ಎನ್‌ಇಪಿಗೆ ವಿರೋಧ ವ್ಯಕ್ತಪಡಿಸಿರುವ ಕೇರಳ ಸರ್ಕಾರ ಆ ನಿಟ್ಟಿನಲ್ಲಿ ಈ ಯೋಜನೆಯನ್ನೂ ವಿರೋಧಿಸಿದೆ. ಹಾಗಾಗಿ ಈ ಯೋಜನೆಯನ್ನು ಜಾರಿಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಇದೀಗ ಕೇರಳ ಸಹಿ ಹಾಕದ ಕಾರಣ ಕೇಂದ್ರವು ರಾಜ್ಯಕ್ಕೆ ಬರಬೇಕಾದ ಶಿಕ್ಷಣದ ಹಲವು ಅನುದಾನಗಳನ್ನು ತಡೆಹಿಡಿದಿದೆ ಎಂಬುದು ಕೇರಳದ ಆರೋಪವಾಗಿದೆ.




