HEALTH TIPS

ಗಡಿಯಾಚೆಗಿನ ಉಗ್ರರಿಗೆ ಪಾಕ್ ಬೆಂಬಲ ನೀಡದಂತೆ ಟರ್ಕಿ ಒತ್ತಾಯಿಸಬೇಕು; ದ್ವಿಪಕ್ಷೀಯ ಸಂಬಂಧಗಳಿಗೆ ಬೆಲೆ ನೀಡಬೇಕು: MEA

ನವದೆಹಲಿ: ಪಾಕಿಸ್ತಾನದ ದಶಕಗಳಷ್ಟು ಹಳೆಯದಾದ ಭಯೋತ್ಪಾದನಾ ಮೂಲಸೌಕರ್ಯವನ್ನು ಕಡಿತಗೊಳಿಸಲು ಹಾಗೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಲು ಟರ್ಕಿ ತನ್ನ ಪ್ರಭಾವವನ್ನು ಬಳಸಬೇಕು ಎಂದು ಭಾರತ ಗುರುವಾರ ಕರೆ ನೀಡಿದೆ. ದ್ವಿಪಕ್ಷೀಯ ಸಂಬಂಧಗಳು ಪರಸ್ಪರರ ಪ್ರಮುಖ ಕಾಳಜಿಗಳ ಸೂಕ್ಷ್ಮತೆಯನ್ನು ಆಧರಿಸಿರಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ಹೇಳಿದೆ.

ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ MEA ವಕ್ತಾರ ರಣಧೀರ್ ಜೈಸ್ವಾಲ್, ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ರದ್ದುಗೊಳಿಸಲು ಹಾಗೂ ದಶಗಳಷ್ಟು ಹಳೆಯದಾದ ಭಯೋತ್ಪಾದನೆ ವಿರುದ್ಧ ವಿಶ್ವಾಸಾರ್ಹ ಮತ್ತು ಪರಿಶೀಲಿಸಬಹುದಾದ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನವನ್ನು ಟರ್ಕಿ ಬಲವಾಗಿ ಒತ್ತಾಯಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.

ಪಹಲ್ಗಾಮ್ ದಾಳಿ ನಂತರ ಪಾಕಿಸ್ತಾನಕ್ಕೆ ಬೆಂಬಲಿಸಿದ ಟರ್ಕಿಯ ಕ್ರಮವನ್ನು ಟೀಕಿಸಿದ ರಣಧೀರ್ ಜೈಸ್ವಾಲ್, ದ್ವಿಪಕ್ಷೀಯ ಸಂಬಂಧಗಳು ಪರಸ್ಪರರ ಪ್ರಮುಖ ಕಾಳಜಿಗಳ ಸೂಕ್ಷ್ಮತೆಯನ್ನು ಆಧರಿಸಿರಬೇಕು. ಈ ವಿಚಾರದಲ್ಲಿ ಭಾರತದ ನಿಲುವು ಸ್ಥಿರ ಮತ್ತು ಬದ್ಧತೆಯಿಂದ ಕೂಡಿದೆ. ಸಂಬಂಧಗಳು ಪರಸ್ಪರರ ಪ್ರಮುಖ ಕಾಳಜಿಗಳ ಸೂಕ್ಷ್ಮತೆ ಮೇಲೆ ಬೆಳೆಯುತ್ತವೆ ಎಂದು ಹೇಳಿದರು.

ಒಂಬತ್ತು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ನಿರ್ವಹಣೆ ಸೇವೆಗಳನ್ನು ಒದಗಿಸುವ ಟರ್ಕಿಶ್-ಸ್ಥಾಪಿತ Çelebi Aviation Pvt Ltd ನ ಭದ್ರತಾ ಕ್ಲಿಯರೆನ್ಸ್ ರದ್ದುಗೊಳಿಸುವ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಕ್ರಮ ಕುರಿತು ಪ್ರತಿಕ್ರಿಯಿಸಿದ ಜೈಸ್ವಾಲ್, ಈ ವಿಷಯ ಕುರಿತು ನವದೆಹಲಿಯಲ್ಲಿನ ಟರ್ಕಿ ರಾಯಭಾರಿ ಅವರೊಂದಿಗೆ ಚರ್ಚಿಸಲಾಗಿದೆ. ಆದರೆ, ಈ ನಿರ್ದಿಷ್ಟ ನಿರ್ಧಾರವನ್ನು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ತೆಗೆದುಕೊಂಡಿದೆ ಎಂದು ಅವರು ಹೇಳಿದರು.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ಭಾರತದ 'ಆಪರೇಷನ್ ಸಿಂಧೂರ್' ಕುರಿತ ಟರ್ಕಿ ಟೀಕೆ ಬೆನ್ನಲ್ಲೇ ಭಾರತ-ಟರ್ಕಿ ಸಂಬಂಧಗಳು ಹದಗೆಟ್ಟ ಹಿನ್ನೆಲೆಯಲ್ಲಿ ರಣಧೀರ್ ಜೈಸ್ವಾಲ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಭಾರತದೊಂದಿಗೆ ಪಾಕ್ ಸೇನಾ ಕಾರ್ಯಾಚರಣೆ ವೇಳೆಯಲ್ಲಿ ಪಾಕಿಸ್ತಾನ ಟರ್ಕಿಯ ಡ್ರೋನ್‌ಗಳನ್ನು ವ್ಯಾಪಕವಾಗಿ ನಿಯೋಜಿಸಿತ್ತು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ಮತ್ತು ಗಡಿ ಸಮಸ್ಯೆಯ ವಿಶೇಷ ಪ್ರತಿನಿಧಿ ವಾಂಗ್ ಯಿ ನಡುವಿನ ಇತ್ತೀಚಿನ ಫೋನ್ ಸಂಭಾಷಣೆ ಕುರಿತು ಮಾತನಾಡಿದ ಜೈಸ್ವಾಲ್, ಮೇ 10 ರಂದು ಇಬ್ಬರೂ ಮಾತನಾಡಿದ್ದಾರೆ. ಈ ಸಮಯದಲ್ಲಿ ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ಅಚಲ ನಿಲುವನ್ನು ದೋವಲ್ ದೃಢವಾಗಿ ತಿಳಿಸಿದ್ದಾರೆ. ಪರಸ್ಪರ ನಂಬಿಕೆ, ಗೌರವ ಮತ್ತು ಸಂವೇದನಾಶೀಲತೆಯು ಭಾರತ-ಚೀನಾ ಸಂಬಂಧ ಅಡಿಪಾಯವನ್ನು ರೂಪಿಸುತ್ತದೆ ಎಂಬುದನ್ನು ಚೀನಾಕ್ಕೆ ಚೆನ್ನಾಗಿ ತಿಳಿದಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries