ಜೈಪುರ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಭುಗಿಲೇಳುತ್ತಿದ್ದಂತೆಯೇ ಭಾರತದಲ್ಲಿ ಪಾಕಿಸ್ತಾನದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಜನರು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದು, ರೈತರು ಪಾಕಿಸ್ತಾನಕ್ಕೆ ರಫ್ತಾಗುತ್ತಿದ್ದ ಆಹಾರ ಪದಾರ್ಥಗಳನ್ನು ಸ್ಥಗಿತಗೊಳಿಸಿದರೆ, ವ್ಯಾಪಾರಸ್ಥರು ಪಾಕಿಸ್ತಾನ ಮತ್ತು ಅದರ ಮಿತ್ರ ರಾಷ್ಟ್ರಗಳೊಂದಿಗಿನ ವ್ಯಾಪಾರ ಸಂಬಂಧವನ್ನೇ ಕಡಿತಗೊಳಿಸಿದ್ದ ಸುದ್ದಿಗಳನ್ನು ನಾವು ಈ ಹಿಂದೆ ನೋಡಿದ್ದೆವು.
ಈ ಪಟ್ಟಿಗೆ ಇದೀಗ ಸ್ವೀಟ್ ಶಾಪ್ ಗಳೂ ಕೂಡ ಸೇರ್ಪಡೆಯಾಗಿದ್ದು, ವಿನೂತನ ರೀತಿಯಲ್ಲಿ 'ಪಾಕ್' ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
'Pak' ನಿಷೇಧ: ಇನ್ಮುಂದೆ Pak ಅಲ್ಲ Shree
ಭಾರತ - ಪಾಕಿಸ್ತಾನ ಸಂಘರ್ಷದ ಬಳಿಕ ಭಾರತೀಯರಲ್ಲಿ ಪಾಕ್ ದ್ವೇಷ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಜೈಪುರದ ಅಂಗಡಿ ಮಾಲೀಕರು 'ಪಾಕ್' ಹೆಸರಿರುವ ತಿನಿಸುಗಳ ಹೆಸರನ್ನೇ ಬದಲಾಯಿಸಿದ್ದಾರೆ. ಅದರಲ್ಲೂ ಕರ್ನಾಟಕದ ಮೈಸೂರಿನ ಪ್ರಸಿದ್ಧ 'ಮೈಸೂರು ಪಾಕ್' ಹೆಸರನ್ನೂ ಕೂಡ ಬದಲಾಯಿಸಲಾಗಿದೆ.
'ಮೈಸೂರು ಪಾಕ್' ಹೆಸರನ್ನು 'ಮೈಸೂರು ಶ್ರೀ' ಎಂದು ಬದಲಾಯಿಸಲಾಗಿದ್ದು, ಮೈಸೂರು ಪಾಕ್ ಮಾತ್ರವಲ್ಲದೇ 'ಪಾಕ್' ಹೆಸರು ಬರುವ ಎಲ್ಲ ಸಿಹಿತಿನಿಸುಗಳ ಹೆಸರುಗಳನ್ನು 'ಶ್ರೀ'ಗೆ ಬದಲಿಸಲಾಗಿದೆ. ಸಿಹಿ ತಿನಿಸುಗಳಲ್ಲಿನ 'ಪಾಕ್' ಪದಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲದಿದ್ದರೂ, ಪಾಕ್ ಎಂಬ ಹೆಸರು ಇರಬಾರದು ಎಂದು ವ್ಯಾಪಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
'ನಾವು ನಮ್ಮ ಸಿಹಿ ತಿನಿಸುಗಳ ಹೆಸರಿನಿಂದ 'ಪಾಕ್' ಪದವನ್ನು ತೆಗೆದುಹಾಕಿದ್ದೇವೆ. 'ಮೋತಿ ಪಾಕ್' ಅನ್ನು 'ಮೋತಿ ಶ್ರೀ' ಎಂದು, 'ಗೊಂಡ್ ಪಾಕ್' ಅನ್ನು 'ಗೊಂಡ್ ಶ್ರೀ' ಎಂದೂ, 'ಮೈಸೂರು ಪಾಕ್' ಅನ್ನು 'ಮೈಸೂರು ಶ್ರೀ' ಎಂದು ಮರುನಾಮಕರಣ ಮಾಡಿದ್ದೇವೆ' ಎಂದು ಅಂಗಡಿ ಮಾಲೀಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.




