HEALTH TIPS

Operation Sindoor | ಕರ್ಮ ನೋಡಿ ಭಯೋತ್ಪಾದಕರನ್ನು ಕೊಂದಿದ್ದೇವೆ: ರಾಜನಾಥ ಸಿಂಗ್

ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಧರ್ಮ ಕೇಳುತ್ತಾ ಅಮಾಯಕರನ್ನು ಕೊಂದಿದ್ದರು. ಇದಕ್ಕೆ ಪ್ರತಿಯಾಗಿ ನಾವು ಕರ್ಮ ನೋಡಿ ಉಗ್ರರನ್ನು ಹತ್ಯೆ ಮಾಡಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. 

ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಬಳಿಕ ಇದೇ ಮೊದಲ ಬಾರಿಗೆ ರಾಜನಾಥ ಸಿಂಗ್ ಅವರು ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ.

ಭಯೋತ್ಪಾದನೆ ವಿರುದ್ಧ ಭಾರತದ ದೃಢಸಂಕಲ್ಪ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಪಾಕ್‌ನ ಪರಮಾಣು ಬೆದರಿಕೆಗೆ ನಾವು ಗಮನ ಹರಿಸದಿರುವುದೇ ಸಾಕ್ಷಿ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅದರಂತೆಯೇ ಮಾತುಕತೆ ನಡೆದರೆ ಅದು ಭಯೋತ್ಪಾದನೆ ಮತ್ತು ಪಿಒಕೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.

ಕಳೆದ 35-40 ವರ್ಷಗಳಿಂದ ಭಾರತ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಪಹಲ್ಗಾಮ್‌ನಲ್ಲಿ ದಾಳಿ ನಡೆಸುವ ಮೂಲಕ ಉಗ್ರರು ಭಾರತದ ಹಣೆಗೆ ನೋವುಂಟು ಮಾಡಲು ಮತ್ತು ಭಾರತದ ಸಾಮಾಜಿಕ ಏಕತೆಗೆ ಧಕ್ಕೆ ತರಲು ಪ್ರಯತ್ನಿಸಿದ್ದರು. ಆದರೆ, ನಾವು 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಮೂಲಕ ತಕ್ಕ ಉತ್ತರ ನೀಡಿದ್ದೇವೆ. ಭಯೋತ್ಪಾದನೆಯ ವಿರುದ್ಧ ನಾವು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಭಾರತ ಇಡೀ ಜಗತ್ತಿಗೆ ತೋರಿಸಿದೆ ಎಂದು ಸಿಂಗ್ ಹೇಳಿದ್ದಾರೆ.

ನಮ್ಮ ಸೇನಾಪಡೆಗಳು ನಿಖರವಾದ ಗುರಿಯನ್ನು ಹೊಂದಿವೆ. ಭಯೋತ್ಪಾದನೆಯ ವಿಷಯದಲ್ಲಿ ಭಾರತಕ್ಕೆ ಮೋಸ ಮಾಡಿದ್ದಕ್ಕಾಗಿ ಪಾಕಿಸ್ತಾನ ಭಾರೀ ಬೆಲೆ ತೆತ್ತಿದೆ. ಭಯೋತ್ಪಾದನೆ ಮುಂದುವರಿದರೆ, ಈ ಬೆಲೆ ಹೆಚ್ಚುತ್ತಲೇ ಇರುತ್ತದೆ ಎಂದು ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನದ ಗಾಯಗಳನ್ನು ಗುಣಪಡಿಸುವ ಏಕೈಕ ಮಾರ್ಗವೆಂದರೆ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವುದನ್ನು ನಿಲ್ಲಿಸುವುದಾಗಿದೆ. ಭಾರತ ಎಂದಿಗೂ ಯುದ್ಧಕ್ಕೆ ಬೆಂಬಲ ನೀಡುವುದಿಲ್ಲ. ಆದರೆ, ನಮ್ಮ ಸಾರ್ವಭೌಮತ್ವದ ಮೇಲೆ ದಾಳಿಯಾದಾಗ ಪ್ರತಿಕ್ರಿಯಿಸದೆ ಸುಮ್ಮನೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries