ಮೆಟಾದಿಂದ ಬಂತು ಹೊಸ ಎಐ ಅಪ್ಲಿಕೇಶನ್.. ChatGPTಗೆ ಶುರುವಾಯ್ತು ನಡುಕ..! ವಾಯ್ಸ್ ಮೂಲಕ ಸುಲಭವಾಗಿ ಬಳಸಬಹುದು. ಟೈಕ್ ದೈತ್ಯ ಮೆಟಾ (Meta) ಈಗಾಗಲೇ ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಎಐ ಅನ್ನು ಸಂಯೋಜಿಸಿದೆ. ಇದನ್ನು ಈಗಾಗಲೇ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಮೂಲಕ ಬಳಸಲಾಗುತ್ತಿದೆ. ಈ ನಡುವೆಯೇ ಮೆಟಾ ಇತ್ತೀಚೆಗೆ ಹೊಸ ಎಐ ಅಪ್ಲಿಕೇಶನ್ (Meta AI App) ಅನ್ನು ಬಿಡುಗಡೆ ಮಾಡಿದೆ. ಇದು ಚಾಟ್ಜಿಪಿಟಿಯೊಂದಿಗೆ (ChatGPT) ಸ್ಪರ್ಧಿಸಲಿದೆ. ಮೆಟಾ ಎಐ ಆಪ್ ಎಂದರೇನು? ಇದರ ಬಳಕೆ ಹೇಗೆ? ಎಂಬಿತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ.
ಭವಿಷ್ಯದಲ್ಲಿ ಎಲ್ಲವೂ 'ಎಐ ಮಯ'ವಾಗಲಿದೆ. ಯಾವುದೇ ಕೆಲಸ ಇದ್ದರೂ ಈ ಟೆಕ್ನಾಲಜಿ ಮೂಲಕವೇ ನಡೆಯಬೇಕು. ಹೌದು, ದಿನೇ ದಿನೆ ಎಐ (AI) ಬಳಕೆ ಸುಲಭವಾಗಿ ಲಭ್ಯವಾಗುತ್ತಿದೆ. ಲಕ್ಷಾಂತರ ಬಳಕೆದಾರರು ಈಗಾಗಲೇ ವಿವಿಧ ಎಐ (ಕೃತಕ ಬುದ್ಧಿಮತ್ತೆ) ಟೂಲ್‌ಗಳನ್ನು ಬಳಸುತ್ತಿದ್ದಾರೆ. ಇದಕ್ಕೆ ಎಐ ಚಾಟ್‌ಬಾಟ್ ಅಪ್ಲಿಕೇಶನ್ ಸೇರಿದೆ. ಈ ಆಪ್ ಲಾಮಾ 4 ಅನ್ನು ಆಧರಿಸಿದೆ. ಮೆಟಾ ಪ್ಲಾಟ್‌ಫಾರ್ಮ್‌ಗಳು ಈಗಾಗಲೇ ಎಐ ಅನ್ನು ಹಲವು ವಿಧಗಳಲ್ಲಿ ಬಳಸಿಕೊಂಡಿವೆ. ಹೊಸದಾಗಿ ಬಿಡುಗಡೆಯಾದ ಆಪ್ ಅನ್ನು ಧ್ವನಿ ಮೂಲಕ ಸುಲಭವಾಗಿ ಬಳಸಬಹುದು. ಈ ಅಪ್ಲಿಕೇಶನ್ ಮೊದಲ ಆವೃತ್ತಿಯಾಗಿದ್ದು, ಬಳಕೆದಾರರ ಪ್ರತಿಕ್ರಿಯೆಯ ಆಧಾರದ ಮೇಲೆ ಇದನ್ನು ಮತ್ತಷ್ಟು ಸುಧಾರಿಸಲಾಗುವುದು.

ಮೆಟಾ ಎಐ ಆಪ್ ಎಂದರೇನು?
ಮೆಟಾ ಎಐ ಒಂದು ಸ್ಮಾರ್ಟ್ ಚಾಟ್‌ಬಾಟ್ ಆಪ್ ಆಗಿದೆ. ಇದು ನೀವು ಏನು ಹೇಳುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳುತ್ತದೆ. ಜೊತೆಗೆ ಅದಕ್ಕೆ ತಕ್ಕಂತೆ ಉತ್ತರ ನೀಡುತ್ತದೆ. ನೀವು ಇದರೊಂದಿಗೆ ಟೆಕ್ಸ್ಟ್ ಮತ್ತು ಧ್ವನಿಯಲ್ಲಿ (ವಾಯ್ಸ್) ಮಾತನಾಡಬಹುದು. ಅಂದರೆ, ಮುಂಬರುವ ದಿನಗಳಲ್ಲಿ ಇದು ನಿಮ್ಮ ವೈಯಕ್ತಿಕ ಎಐ ಸಹಾಯಕನಂತೆ ಕೆಲಸ ಮಾಡುತ್ತದೆ. ಇದು ನಿಮಗೆ ಉತ್ತರಿಸುವುದಲ್ಲದೆ, ಕ್ರಮೇಣ ನಿಮ್ಮನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ಪಷ್ಟ ಉತ್ತರಗಳನ್ನು ನೀಡುವುದು ಖಚಿತವಾಗಿದೆ.
ನಿಮ್ಮ ಎಐ ಚಾಟ್‌ಗಳನ್ನು ಹಂಚಿಕೊಳ್ಳಬಹುದು
'ಡಿಸ್ಕವರ್ ಫೀಡ್' ಫೀಚರ್ ಮೆಟಾ ಎಐನ ಮತ್ತೊಂದು ವಿಶೇಷವಾಗಿದೆ. ಇದರಲ್ಲಿ ನಿಮ್ಮ ಸ್ನೇಹಿತರು ಎಐ ಬಗ್ಗೆ ಏನು ಕೇಳುತ್ತಿದ್ದಾರೆ ಎಂಬುದನ್ನು ನೋಡಬಹುದು. ಮತ್ತು ಎಷ್ಟು ತಮಾಷೆಯ ಉತ್ತರಗಳು ಸಿಗುತ್ತಿವೆ ಎನ್ನುವುದು ತಿಳಿಯುತ್ತದೆ. ನೀವು ಎಐ ಬಳಿ ಪ್ರಶ್ನೆ ಕೇಳಿದಾಗ, ಅದು ಉತ್ತರ ನೀಡುತ್ತದೆ. ಎಐ ಉತ್ತರದ ಬಳಿಕ ಅದನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತದೆ. ನೀವು ಬಯಸದ ಹೊರತು ನಿಮ್ಮ ಯಾವುದೇ ಸಂಭಾಷಣೆಗಳನ್ನು ಹಂಚಿಕೊಳ್ಳಲಾಗುವುದಿಲ್ಲ. ಆದರೆ, ನೀವು ಬಯಸಿದರೆ ನಿಮ್ಮ ಎಐ ಚಾಟ್‌ಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಹುದು. ಇತರರು ಸಹ ನೋಡಲು ಅವಕಾಶ ನೀಡಬಹುದು.
ಮೆಟಾ ಹೇಳಿದ್ದೇನು?
ಹೊಸ ಎಐ ಚಾಟ್‌ಬಾಟ್ ಅಪ್ಲಿಕೇಶನ್ ಬಗ್ಗೆ ಮೆಟಾ ಕಂಪನಿ ಮಾಹಿತಿ ನೀಡಿದೆ. 'ಮೆಟಾ ಎಐ' ನಿಮ್ಮನ್ನು ತಿಳಿದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ನಿಮ್ಮ ಪ್ರಶ್ನೆಗಳಿಗೆ ಅದರ ಉತ್ತರಗಳು ಹೆಚ್ಚು ಸಹಾಯಕವಾಗಿರುತ್ತವೆ. ಮತ್ತು ನೀವು ಸ್ನೇಹಿತರೊಂದಿಗೆ ಮಾತನಾಡುತ್ತಿರುವಂತೆ ಅದರೊಂದಿಗೆ ಆರಾಮವಾಗಿ ಮಾತನಾಡಬಹುದು ಎಂದು ಮೆಟಾ ಹೇಳಿದೆ. ನಿಮ್ಮ ಸಂಭಾಷಣೆಗಳನ್ನು ಹಂಚಿಕೊಳ್ಳಲು ಸೋಶಿಯಲ್ ಫೀಚರ್ ಸಹ ಲಭ್ಯವಿದೆ. ವಿಶೇಷವೆಂದರೆ, ಮೆಟಾ ಇದನ್ನು ಕೇವಲ ಎಐ ಚಾಟ್‌ಬಾಟ್‌ನಂತೆ ಮಾತ್ರವಲ್ಲದೆ ಸಾಮಾಜಿಕ ಸ್ಪರ್ಶದೊಂದಿಗೆ ಪರಿಚಯಿಸಿದೆ.
ಹೊಸ ಫೀಚರ್ ಈ ದೇಶಗಳಲ್ಲಿ ಮಾತ್ರ ಲಭ್ಯ!
ಮೆಟಾ ಎಐಗೆ ಇದೀಗ ಹೊಸ ವಾಯ್ಸ್ ಮೋಡ್ ಸೇರಿಸಲಾಗಿದೆ. ಇನ್ಮುಂದೆ ನೀವು ಮಾತನಾಡುವ ಮೂಲಕ ಪ್ರಶ್ನೆಗಳನ್ನು ಕೇಳಬಹುದು. ಎಐ ಸಹ ಮಾತನಾಡುವ ಮೂಲಕ ನಿಮಗೆ ಉತ್ತರ ನೀಡುತ್ತದೆ. ಇದಕ್ಕಾಗಿ ಮೆಟಾ ಫುಲ್ ಡ್ಯೂಪ್ಲೆಕ್ಸ್ ಸ್ಪೀಚ್ ಎಂಬ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ನೀವು ಮನುಷ್ಯರೊಂದಿಗೆ ಮಾತನಾಡುತ್ತಿರುವಂತೆ ಭಾವನೆ ಮೂಡುತ್ತದೆ. ಪ್ರಸ್ತುತ, ಈ ವಾಯ್ಸ್ ಫೀಚರ್ ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶದಲ್ಲಿ ಬಳಕೆಯಲ್ಲಿದೆ. ಈ ಫೀಚರ್ ಪರೀಕ್ಷೆ ಹಂತದಲ್ಲಿದೆ. ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಇದು ಯಾವಾಗ ಲಭ್ಯವಿರುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ಬಹಿರಂಗಗೊಳ್ಳುವ ಸಾಧ್ಯತೆಯಿದೆ.




