ನವದೆಹಲಿ: ಭಾರತದ ಜನಸಂಖ್ಯೆ 2025ರಲ್ಲಿ ಅಂದಾಜು 146 ಕೋಟಿಗೆ ತಲುಪಲಿದ್ದು ಜಗತ್ತಿನ ಅತಿ ಹೆಚ್ಚು ಜನಬಾಹುಳ್ಯದ ದೇಶವಾಗಿ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿಯೊಂದು ಹೇಳಿದೆ. ಅಲ್ಲದೆ ದೇಶದ ಒಟ್ಟು ಫಲವಂತಿಕೆ ದರವು ಬದಲಿ ದರಕ್ಕಿಂತ (ರೀ-ಪ್ಲೇಸ್ವೆುಂಟ್ ರೇಟ್) ಕೆಳಗೆ ಕುಸಿದಿದೆ ಎಂದೂ ವರದಿ ತಿಳಿಸಿದೆ.
'ದ ರಿಯಲ್ ಫರ್ಟಿಲಿಟಿ ಕ್ರೖೆಸಿಸ್' ಶೀರ್ಷಿಕೆಯಲ್ಲಿ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್ಎಫ್ಪಿಎ) 2025ರ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಷನ್ ರಿಪೋರ್ಟ್, ಫಲವಂತಿಕೆ ದರ ಕುಸಿತಕ್ಕೆ ಗಾಬರಿಯಾಗುವ ಬದಲು ಸಾಧಿಸದ ಸಂತಾನೋತ್ಪತ್ತಿ ಗುರಿಗಳನ್ನು ನಿಭಾಯಿಸುವುದಕ್ಕೆ ಗಮನಹರಿಸುವುದು ಅಗತ್ಯವೆಂದು ಪ್ರತಿಪಾದಿಸಿದೆ. ದಶಲಕ್ಷಗಟ್ಟಲೆ ಜನರು ತಮ್ಮ ನೈಜ ಫಲವತ್ತತೆ ಗುರಿಗಳನ್ನು ಸಾಧಿಸಲು ವಿಫಲರಾಗಿದ್ದಾರೆಂದು ವರದಿ ಹೇಳಿದೆ. ಇದುವೇ ನಿಜವಾದ ಬಿಕ್ಕಟ್ಟಾಗಿದೆ. ಅಧಿಕ ಜನಸಂಖ್ಯೆಯೋ ಕಡಿಮೆ ಜನಸಂಖ್ಯೆಯೋ ಎನ್ನುವುದು ನಿಜವಾದ ಬಿಕ್ಕಟ್ಟಲ್ಲ. ಹೆಚ್ಚಿನ ಸಂತಾನೋತ್ಪತ್ತಿ ಅಂಶದಲ್ಲಿ ಉತ್ತರ ಅಡಗಿದೆ ಎಂದು ವಿಶ್ವಸಂಸ್ಥೆ ಪ್ರತಿಪಾದಿಸಿದೆ.
ಲೈಂಗಿಕತೆ, ಗರ್ಭಧಾರಣೆ ತಡೆ ಮತ್ತು ಕುಟುಂಬವನ್ನು ಆರಂಭಿಸುವ ವಿಚಾರದಲ್ಲಿ ಮುಕ್ತ ಹಾಗೂ ಮಾಹಿತಿಯುಕ್ತ ಶೇ. 150ರಷ್ಟು ಆಯ್ಕೆಗಳನ್ನು ಮಾಡುವ ವ್ಯಕ್ತಿಯ ಸಾಮರ್ಥ್ಯವನ್ನು ಅದು ಸೂಚಿಸುತ್ತದೆ. ಜನಸಂಖ್ಯೆ ಸಂಯೋಜನೆ, ಫಲವಂತಿಕೆ ಮತ್ತು ಆಯಸ್ಸಿನಲ್ಲಿ ಆಗಿರುವ ಬದಲಾವಣೆಗಳನ್ನು ಕೂಡ ವರದಿ ಗಮನಿಸಿದ್ದು ಅದು ಜನಸಂಖ್ಯಾ ಪರಿವರ್ತನೆಯಲ್ಲಿ ಮುಖ್ಯವಾಗಿದೆ ಎಂದಿದೆ.
ಫಲವಂತಿಕೆ ದರ ಕುಸಿತ
ಭಾರತದ ತಲಾ ಮಹಿಳೆಯ ಒಟ್ಟು ಫಲವತ್ತತೆ ದರ 1.9 ಜನನಕ್ಕೆ ಇಳಿದಿದೆ. ಅಂದರೆ ರೀಪ್ಲೇಸ್ವೆುಂಟ್ ಮಟ್ಟವಾದ 2.1ಕ್ಕಿಂತ ಕೆಳಗೆ ಕುಸಿದಿದೆ. ಯವುದೇ ವಲಸೆ ಇಲ್ಲದೆ, ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಜನಸಂಖ್ಯಾ ಗಾತ್ರವನ್ನು ನಿಭಾಯಿಸುವುದಕ್ಕೆ ಅಗತ್ಯವಾದ ಮಕ್ಕಳಿಗಿಂತ ಕಡಿಮೆ ಮಕ್ಕಳನ್ನು ಭಾರತೀಯ ಮಹಿಳೆಯರು ಹೊಂದುತ್ತಿದ್ದಾರೆನ್ನುವುದು ಇದರ ಅರ್ಥವಾಗಿದೆ ಎಂಬುದಾಗಿ ವರದಿ ವಿವರಿಸಿದೆ. ಜನನ ದರ ನಿಧಾನವಾದರೂ ಭಾರತದ ಯುವಜನರ ಸಂಖ್ಯೆ ಗಣನೀಯವಾಗಿಯೇ ಇದೆ.
2023 ಏಪ್ರಿಲ್: ಚೀನಾವನ್ನು ಹಿಂದಿಕ್ಕಿ 143 ಕೋಟಿ ಜನಸಂಖ್ಯೆಯೊಂದಿಗೆ ಭಾರತ 2023ರಲ್ಲಿ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಿತ್ತು.




