ನವದೆಹಲಿ: 'ಒಂದು ದೇಶ, ಒಂದು ಚುನಾವಣೆ'ಯ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರದ ನಂತರ 2034ರಲ್ಲಿ ಮೊದಲ ಬಾರಿಗೆ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಅನುಗುಣವಾಗಿ, 2029ರ ನಂತರ ಆಯ್ಕೆಯಾಗುವ ರಾಜ್ಯ ವಿಧಾನಸಭೆಗಳ ಅವಧಿಯು 2034ರ ಸಾರ್ವತ್ರಿಕ ಚುನಾವಣೆಗೆ ಸರಿಹೊಂದುವಂತೆ ಸಂಕ್ಷಿಪ್ತವಾಗಿರಲಿದೆ.
2027ರ ನಂತರದಲ್ಲಿ, 2032ರಲ್ಲಿ ಆಯ್ಕೆ ಆಗಬೇಕಾದ ಅಸೆಂಬ್ಲಿಗಳ ಅವಧಿಯು ಕೇವಲ ಎರಡು ವರ್ಷ ಆಗಿರಲಿದೆ. ಭಾರತದ ಅತಿ ಹೆಚ್ಚು ಮತದಾರರಿರುವ ಉತ್ತರ ಪ್ರದೇಶ ವಿಧಾನಸಭೆಯ ಮುಂದಿನ ಚುನಾವಣೆಯು 2034ರಲ್ಲಿ ನಡೆಯಬಹುದಾದ ಲೋಕಸಭೆ ಚುನಾವಣೆಯೊಂದಿಗೆ ಸುಸಂಗತವಾಗಿರುವಂತೆ ಖಾತರಿಪಡಿಸುವುದು ಇದರ ಉದ್ದೇಶವಾಗಿದೆ ಎಂದು 'ಏಕ ದೇಶ, ಏಕ ಚುನಾವಣೆ' ಮಸೂದೆ (129ನೇ ಸಂವಿಧಾನ ತಿದ್ದುಪಡಿ ಮಸೂದೆ2024) ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಮುಖ್ಯಸ್ಥ ಪಿ.ಪಿ. ಚೌಧರಿ ವಿವರಿಸಿದ್ದಾರೆ. 129ನೇ ಸಂವಿಧಾನ ತಿದ್ದುಪಡಿ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ ಮಸೂದೆ) 2024 ಇವೆರಡರಲ್ಲೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ನಿಯಮಗಳಿವೆ.
ಪ್ರಕ್ರಿಯೆ ಉದ್ದೇಶ
ಲೋಕಸಭೆ ಹಾಗೂ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ವಿಧಾನಸಭೆಗಳಿಗೆ ಒಟ್ಟೊಟ್ಟಿಗೆ (ಒಂದೇ ದಿನ ಅಥವಾ ವಿವಿಧ ದಿನ) ಚುನಾವಣೆ ನಡೆಸುವ ಉದ್ದೇಶದಿಂದ ಈ ತಿದ್ದುಪಡಿ ಮಸೂದೆಗಳನ್ನು ರೂಪಿಸಲಾಗಿದೆ. ಪದೇಪದೆ ಚುನಾವಣೆಗಳು ನಡೆಯುವುದನ್ನು ತಪ್ಪಿಸಿ ವೆಚ್ಚ ಕಡಿತ ಮಾಡಿ ಬೊಕ್ಕಸದ ಮೇಲಿನ ಹೊರೆ ತಗ್ಗಿಸುವುದು 'ಒಂದು ದೇಶ, ಒಂದು ಚುನಾವಣೆ' ಪ್ರಸ್ತಾಪದ ಉದ್ದೇಶ. ಈ ಬಗ್ಗೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ 2024ರ ಮಾ.14ರಂದು ವಿಸõತ ವರದಿ ರಾಷ್ಟ್ರಪತಿಗೆ ಸಲ್ಲಿಸಿತ್ತು.
ರಾಷ್ಟ್ರಪತಿ ಅಧಿಸೂಚನೆ
ಸಂವಿಧಾನ ತಿದ್ದುಪಡಿ ಮಸೂದೆಯ ಪ್ರಕಾರ, 2029ರಲ್ಲಿ ನಡೆಯುವ ಎಲ್ಲ ಸಾಧ್ಯತೆ ಇರುವ ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆಯ ಪ್ರಥಮ ಅಧಿವೇಶನ ನಡೆಸುವ ದಿನಾಂಕದ ಬಗ್ಗೆ ರಾಷ್ಟ್ರಪತಿಯವರು ಅಧಿಸೂಚನೆ ಹೊರಡಿಸಬಹುದಾಗಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗಳು ಯಾವಾಗ ನಡೆಯಬಹುದೆಂದು ಆ ಅಧಿಸೂಚನೆ ನಮೂದಿಸಲಿದೆ. ಈ ದಿನಾಂಕದ ನಂತರ ರಚನೆಯಾಗುವ ಎಲ್ಲ ರಾಜ್ಯ ವಿಧಾನಸಭೆಗಳ ಅವಧಿ ಲೋಕಸಭೆಯ ಐದು ವರ್ಷದ ಅವಧಿಯೊಂದಿಗೆ ಮುಕ್ತಾಯವಾಗಲಿದೆ. ತಮ್ಮ ಐದು ವರ್ಷ ಅವಧಿಗಿಂತ ಮುಂಚೆಯೇ ಲೋಕಸಭೆ ಅಥವಾ ಯಾವುದೇ ವಿಧಾನಸಭೆ ವಿಸರ್ಜನೆಗೊಂಡರೆ, ಐದು ವರ್ಷದ ಉಳಿದ ಅವಧಿಗೆ ಮಾತ್ರವೇ ಚುನಾವಣೆ ನಡೆಯಲಿದೆ. ಇದು ಏಕಕಾಲದ ಚುನಾವಣೆ ಪ್ರಕ್ರಿಯೆಯ ಆವರ್ತದೊಂದಿಗೆ ಮತದಾನವನ್ನು ಸುಸಂಗತಗೊಳಿಸಲು ನೆರವಾಗುತ್ತದೆ. ಚುನಾವಣೆ ನಡೆಯಬೇಕಿರುವ ರಾಜ್ಯಗಳಲ್ಲಿ ಕೂಡ ಲೋಕಸಭೆ ಚುನಾವಣೆಯೊಂದಿಗೆ ಸಂಗತಗೊಳ್ಳುವ ರೀತಿಯಲ್ಲಿ ಆಯಾ ವಿಧಾನಸಭೆಗೆ ಮತದಾನ ನಡೆಯಲಿದೆ.
ರಾಜ್ಯಸಭೆಗೆ ನಟ ಕಮಲ್ ಹಾಸನ್
ಚೆನ್ನೈ: ಹಿರಿಯ ನಟರಾಜಕಾರಣಿ ಕಮಲ್ ಹಾಸನ್ ಸಹಿತ ಆರು ಜನರು ತಮಿಳುನಾಡು ವಿಧಾನಸಭೆಯಿಂದ ಸಂಸತ್ತಿನ ಮೇಲ್ಮನೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲು ಸಜ್ಜುಗೊಂಡಿದ್ದಾರೆ. ಆಳುವ ಡಿಎಂಕೆಯ ಮೂವರು ಅಭ್ಯರ್ಥಿಗಳ ಸಹಿತ ಆರು ಮಂದಿ ಸಲ್ಲಿಸಿರುವ ನಾಮಪತ್ರಗಳು ಸಿಂಧುವಾಗಿದ್ದು ಮಂಗಳವಾರ ಅಂಗೀಕಾರವಾಗಿವೆ ಎಂದು ಚುನಾವಣಾಧಿಕಾರಿ ಆಗಿರುವ ವಿಧಾನಸಭೆ ಕಾರ್ಯåಲಯದ ಹೆಚ್ಚುವರಿ ಕಾರ್ಯದರ್ಶಿಯವರ ಕಚೇರಿ ತಿಳಿಸಿದೆ.
ಮಕ್ಕಳ್ ನೀತಿ ಮೈಯಂ ಸಂಸ್ಥಾಪಕ ಕಮಲ್ ಹಾಸನ್, ಡಿಎಂಕೆ ಉಮೇದುವಾರರಾದ ಪಿ. ವಿಲ್ಸನ್, ಎಸ್.ಆರ್. ಶಿವಲಿಂಗಂ, ಎಐಎಡಿಎಂಕೆಯ ಐ.ಎಸ್.ಇನ್ಬದುರೈ ಮತ್ತು ಎಂ.ಧನಪಾಲ್ ಅವರ ನಾಮಪತ್ರಗಳನ್ನು ಮಂಗಳವಾರ ಪರಿಶೀಲಿಸಲಾಯಿತು. ಅವೆಲ್ಲವೂ ಅಂಗೀಕಾರವಾಗಿದ್ದು ಏಳು ಸ್ವತಂತ್ರ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ವಿಲ್ಸನ್ ಸತತ ಎರಡನೇ ಬಾರಿ ಸಂಸತ್ತಿನ ಮೇಲ್ಮನೆ ಪ್ರವೇಶಿಸುತ್ತಿದ್ದು ಬಹುಭಾಷಾ ನಟ ಕಮಲ್ ಹಾಸನ್ಗೆ ಇದು ಮೊದಲ ಅನುಭವವಾಗಲಿದೆ.




