HEALTH TIPS

ಬ್ಯಾಂಕುಗಳಿಗೆ ಹೊರೆ ತಗ್ಗಿಸಲು ಯುಪಿಐ ವಹಿವಾಟುಗಳಿಗೆ ಮತ್ತೆ ಎಂಡಿಆರ್ ದರ ಜಾರಿಗೆ ತರಲು ಸರ್ಕಾರ ಯೋಜನೆ

ಮುಂಬೈ: ಭಾರತದಲ್ಲಿ ಡಿಜಿಟಲ್ ವಹಿವಾಟು ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಯುಪಿಐ ಸೌಲಭ್ಯ ಬಂದ ಬಳಿಕ ಡಿಜಿಟಲ್ ವಹಿವಾಟು ಸ್ಫೋಟಗೊಂಡಿದೆ. ಶೇ. 80ರಷ್ಟು ಡಿಜಿಟಲ್ ವಹಿವಾಟುಗಳು ಯುಪಿಐ ಮೂಲಕ ಆಗುತ್ತಿದೆ. ಭಾರೀ ಪ್ರಮಾಣದ ವಹಿವಾಟುಗಳನ್ನು ನಿರ್ವಹಿಸುವುದು ಬ್ಯಾಂಕುಗಳಿಗೆ ಬಹಳ ದೊಡ್ಡ ಹೊರೆಯಾಗಿ ಹೋಗಿದೆ.

ಯುಪಿಐ ವಹಿವಾಟುಗಳ ಮೇಲೂ ಮರ್ಚೆಂಡ್ ಡಿಸ್ಕೌಂಟ್ ರೇಟ್ ವಿಧಿಸಲು ಅನುಮತಿಸುವಂತೆ ಬ್ಯಾಂಕುಗಳು ಸರ್ಕಾರವನ್ನು ಕೇಳುತ್ತಿವೆ. ಸರ್ಕಾರವು ದೊಡ್ಡ ಪ್ರಮಾಣದ ಯುಪಿಐ ವಹಿವಾಟಿಗೆ ಎಂಡಿಆರ್​​ಗೆ ಅನುಮತಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎನ್​​ಡಿಟಿವಿ ಈ ಬಗ್ಗೆ ಮಾಡಿದ ವರದಿ ಪ್ರಕಾರ, ಮೂರು ಸಾವಿರ ರೂಗಿಂತ ಹೆಚ್ಚಿನ ಮೌಲ್ಯದ ವಹಿವಾಟಿಗೆ ಎಂಡಿಆರ್ ವಿಧಿಸುವ ನಿರ್ಧಾರಕ್ಕೆ ಚಿಂತನೆ ನಡೆದಿರುವುದು ತಿಳಿದುಬಂದಿದೆ.

ಏನಿದು ಮರ್ಚೆಂಟ್ ಡಿಸ್ಕೌಂಟ್ (ಎಂಡಿಆರ್) ರೇಟ್?

ವ್ಯಾಪಾರಿ ಬಳಿ ಗ್ರಾಹಕ ವ್ಯವಹಾರ ನಡೆಸಿ ಡಿಜಿಟಲ್ ಆಗಿ ಹಣ ಪಾವತಿಸಿದಾಗ ಬ್ಯಾಂಕುಗಳು ಮರ್ಚೆಂಡ್ ಡಿಸ್ಕೌಂಟ್ ರೇಟ್ ವಿಧಿಸುತ್ತವೆ. ಇದು ವರ್ತಕ ಅಥವಾ ವ್ಯಾಪಾರಿಗೆ ಬ್ಯಾಂಕು ವಿಧಿಸುವ ದರ. ಎಂಡಿಆರ್ ಶೇ. 2ರಷ್ಟು ಇದೆ ಎಂದಿಟ್ಟುಕೊಂಡರೆ, ಗ್ರಾಹಕನು 1,000 ರೂ ಪಾವತಿಸಿದಾಗ ವ್ಯಾಪಾರಿಯ ಅಕೌಂಟ್​​ಗೆ 980 ರೂ ಮಾತ್ರವೇ ಹೋಗುತ್ತದೆ. ಉಳಿದ 20 ರೂ ಹಣವು ಬ್ಯಾಂಕು ಮತ್ತು ಪೇಮೆಂಟ್ ಸರ್ವಿಸ್ ಪ್ರೊವೈಡರ್ ಕಂಪನಿಗಳಿಗೆ ಹಂಚಿಕೆ ಆಗುತ್ತದೆ. ವ್ಯಾಪಾರಿಯ ಬ್ಯಾಂಕ್, ಗ್ರಾಹಕನ ಬ್ಯಾಂಕ್ ಮತ್ತು ಪೇಮೆಂಟ್ ಸರ್ವಿಸ್ ನೀಡುಗರ ಮಧ್ಯೆ ಈ ಎಂಡಿಆರ್ ಹಣ ಹಂಚಿಕೆ ಆಗುತ್ತದೆ.

ಇಲ್ಲಿ ಡಿಜಿಟಲ್ ಪಾವತಿ ಎಂದರೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್​​, ಯುಪಿಐ ಮೂಲಕ ಮಾಡಲಾಗುವ ಹಣ ಪಾವತಿಯಾಗಿರುತ್ತದೆ. ಕ್ರೆಡಿಟ್ ಕಾರ್ಡ್​​ಗಳಿಗೆ ಈಗಲೂ ಎಂಡಿಆರ್ ದರ ಅನ್ವಯ ಆಗುತ್ತದೆ. ಯುಪಿಐ ಅನ್ನು ಉತ್ತೇಜಿಸುವ ದೃಷ್ಟಿಯಿಂದ ವಿನಾಯಿತಿ ನೀಡಲಾಗುತ್ತಿದೆ. ಈ ಹಿಂದೆ ದೊಡ್ಡ ಪ್ರಮಾಣದ ಯುಪಿಐ ವಹಿವಾಟುಗಳಿಗೆ ಎಂಡಿಆರ್ ಇತ್ತು. ನಂತರ ಅದನ್ನು ತೆಗೆದುಹಾಕಲಾಯಿತು. ಈಗ 3,000 ರೂಗಳಿಗಿಂತ ಹೆಚ್ಚಿನ ಮೌಲ್ಯದ ಯುಪಿಐ ವಹಿವಾಟಿಗೆ ಎಂಡಿಆರ್ ಅನ್ನು ಜಾರಿಗೆ ತರುವ ಸಾಧ್ಯತೆ ಇದೆ. ಸಣ್ಣ ವರ್ತಕರಿಗೆ ವಿನಾಯಿತಿ ಸಿಗಬಹುದು.

ಯುಪಿಐ ವಹಿವಾಟಿಗೆ ಶೇ. 0.3 ಎಂಡಿಆರ್?

ಸದ್ಯ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್​​ಗಳ ವಹಿವಾಟಿಗೆ ಎಂಡಿಆರ್ ಶೇ. 0.9ರಿಂದ ಶೇ. 2ರವರೆಗೂ ಇದೆ. ಮೂರು ಸಾವಿರ ರೂಗಿಂತ ಹೆಚ್ಚಿನ ಮೌಲ್ಯದ ಯುಪಿಐ ವಹಿವಾಟಿಗೆ ಶೇ. 0.3ರ ಎಂಡಿಆರ್ ಅನ್ನು ವಿಧಿಸಬಹುದು ಎಂದು ಪೇಮೆಂಟ್ ಕೌನ್ಸಿಲ್ ಸಲಹೆ ನೀಡಿದೆ ಎಂದು ಹೇಳಲಾಗಿದೆ.

ಶೇ. 0.3 ಎಂಡಿಆರ್ ಎಂದರೆ, ನೀವು 5,000 ರೂ ಯುಪಿಐ ಪಾವತಿ ಮಾಡಿದರೆ ವರ್ತಕನಿಗೆ 4,985 ರೂ ಸಂದಾಯವಾಗುತ್ತದೆ. 15 ರೂ ಕಡಿತಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ವರ್ತಕರು ತಮ್ಮ ಉತ್ಪನ್ನದ ಬೆಲೆ ಏರಿಸುವ ಸಾಧ್ಯತೆ ಇಲ್ಲದಿಲ್ಲ.

ಯುಪಿಐ ವಹಿವಾಟಿನ ಮೇಲೆ ಜಿಎಸ್​​ಟಿ ಇಲ್ಲ

ಎರಡು ಸಾವಿರ ರೂಗಿಂತ ಹೆಚ್ಚಿನ ಮೌಲ್ಯದ ಯುಪಿಐ ವಹಿವಾಟುಗಳ ಮೇಲೆ ಜಿಎಸ್​​ಟಿ ವಿಧಿಸಲು ಯೋಜಿಸಲಾಗುತ್ತಿದೆ ಎನ್ನುವ ಸುದ್ದಿಯನ್ನು ಸರ್ಕಾರ ಅಲ್ಲಗಳೆದಿದೆ. ಅಂತಹ ಯಾವ ಆಲೋಚನೆಯೂ ಇಲ್ಲ ಎಂದಿದೆ. ಕ್ರೆಡಿಟ್ ಕಾರ್ಡ್ ವಹಿವಾಟಿಗೆ ವಿಧಿಸಲಾಗುವ ಎಂಡಿಆರ್ ಮೊತ್ತಕ್ಕೆ ಜಿಎಸ್​​ಟಿ ಹಾಕಲಾಗುತ್ತದೆ. ಈಗ 3,000 ರೂ ಮೌಲ್ಯದ ಯುಪಿಐ ವಹಿವಾಟಿಗೆ ಎಂಡಿಆರ್ ಹೇರಿಕೆ ಮಾಡಿದ್ದೇ ಆದಲ್ಲಿ, ಆ ಎಂಡಿಆರ್ ಹಣಕ್ಕೆ ಜಿಎಸ್​​ಟಿ ವಿಧಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries