HEALTH TIPS

ಮಕ್ಕಳಿಗೆ ಕೇವಲ 1%, ಉಳಿದ 99% ಆಸ್ತಿ ದಾನ ಮಾಡುವುದಾಗಿ ಘೋಷಿಸಿದ ಬಿಲ್ ಗೇಟ್ಸ್‌!

ವಾಶಿಂಗ್ಟನ್:  ಜಗತ್ತಿನ ಆಗರ್ಭ ಶ್ರೀಮಂತರಲ್ಲಿ ಒಬ್ಬರಾದ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ತಮ್ಮ ಸಂಪತ್ತಿನ ಶೇ. 99ರಷ್ಟು ಹಣವನ್ನು ದಾನ ಮಾಡಲು ತೀರ್ಮಾನಿಸಿದ್ದಾರೆ. ತಮ್ಮ ಮಕ್ಕಳಿಗೆ ಶೇ. 1ರಷ್ಟು ಹಣವನ್ನು ಮಾತ್ರವೇ ನೀಡಲಿದ್ದೇನೆ ಎಂದು ಅವರು ಹೇಳಿದ್ದಾರೆ.ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ ಪ್ರಕಾರ ಬಿಲ್‌ ಗೇಟ್ಸ್‌ ಸುಮಾರು 175 ಬಿಲಿಯನ್‌ ಡಾಲರ್‌ ಆಸ್ತಿ ಹೊಂದಿದ್ದಾರೆ.

2045ರ ವೇಳೆಗೆ ಇದು 200 ಬಿಲಿಯನ್‌ ಡಾಲರ್‌ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 198 ಬಿಲಿಯನ್‌ ಡಾಲರ್‌ಗಳನ್ನು ದಾನ ಮಾಡಲು ಬಿಲ್‌ ಗೇಟ್ಸ್‌ ಉದ್ದೇಶಿಸಿದ್ದಾರೆ. ಉಳಿದ 2 ಬಿಲಿಯನ್‌ ಡಾಲರ್‌ಗಳನ್ನು ಮಕ್ಕಳಿಗೆ ನೀಡಲು ತೀರ್ಮಾನಿಸಿದ್ದಾರೆ.

ರೂಪಾಯಿ ಲೆಕ್ಕದಲ್ಲಿ 198 ಬಿಲಿಯನ್‌ ಡಾಲರ್‌ ಅಂದರೆ ಸುಮಾರು 17 ಲಕ್ಷ ಕೋಟಿ ರೂ. ಆಗಲಿದೆ. 2 ಬಿಲಿಯನ್‌ ಡಾಲರ್‌ ಅಂದರೆ 17,100 ಕೋಟಿ ರೂ. ಆಗಲಿದ್ದು, ಇದನ್ನು ಮಕ್ಕಳಿಗೆ ನೀಡಲಿದ್ದಾರೆ.

ಯಾವ ಕಾರ್ಯಕ್ಕೆ ಈ ಹಣ ದಾನ?


ಮುಂದಿನ ಎರಡು ದಶಕಗಳಲ್ಲಿ ಆಫ್ರಿಕಾದಾದ್ಯಂತ ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸಲು ತಮ್ಮ ಅಪಾರ ಸಂಪತ್ತಿನ ಬಹುಭಾಗವನ್ನು ಖರ್ಚು ಮಾಡಲು ಪ್ರತಿಜ್ಞೆ ಮಾಡಿರುವುದಾಗಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರು ಹೇಳಿದ್ದಾರೆ.

ಅಡಿಸ್ ಅಬಾಬಾದಲ್ಲಿ ಆಫ್ರಿಕನ್ ಯೂನಿಯನ್ ಪ್ರಧಾನ ಕಛೇರಿಯಲ್ಲಿ ಮಾತನಾಡಿದ ಗೇಟ್ಸ್, ತಮ್ಮ ದಾನ ಕಾರ್ಯಗಳು ಆಫ್ರಿಕಾ ಖಂಡದಲ್ಲಿ ಮಾನವ ಸಾಮರ್ಥ್ಯವನ್ನು ಹೊರ ತೆಗೆಯಲು ಸಹಾಯ ಮಾಡಲಿದೆ. ಇದು ಎಲ್ಲಾ ದೇಶಗಳಿಗೆ ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.



ಉತ್ತಮ ಆರೋಗ್ಯ ಮತ್ತು ಶಿಕ್ಷಣವು ಅಭಿವೃದ್ಧಿಗೆ ಅಡಿಪಾಯವಾಗಿದೆ ಎಂದು ಬಿಲ್‌ ಗೇಟ್ಸ್‌ ಒತ್ತಿ ಹೇಳಿದ್ದಾರೆ. ಅಮೆರಿಕ ವಿದೇಶಾಂಗ ನೆರವು ಕಡಿತಗೊಂಡಿರುವ ಸಮಯದಲ್ಲಿಯೇ ಅದೇ ದೇಶದ ಉದ್ಯಮಿಯೊಬ್ಬರು ಈ ದಾನದ ಘೋಷಣೆ ಮಾಡಿದ್ದಾರೆ.

"ನಾನು ಇತ್ತೀಚೆಗೆ ನನ್ನ ಸಂಪತ್ತನ್ನು ಮುಂದಿನ 20 ವರ್ಷಗಳಲ್ಲಿ ದಾನ ಮಾಡುವ ಬದ್ಧತೆ ನೀಡಿದ್ದೇನೆ. ಆ ಹಣದ ಬಹುಪಾಲು ಭಾಗವನ್ನು ಆಫ್ರಿಕಾದಲ್ಲಿನ ಸವಾಲುಗಳನ್ನು ಎದುರಿಸಲು ನಿಮಗೆ ಸಹಾಯ ಮಾಡಲು ಖರ್ಚು ಮಾಡಲಾಗುವುದು," ಎಂದು ಬಿಲ್‌ ಗೇಟ್ಸ್ 12,000 ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ಯುವ ನಾಯಕರನ್ನು ಉದ್ದೇಶಿಸಿ ಹೇಳಿದ್ದಾರೆ.

ಆರೋಗ್ಯ ಮತ್ತು ಶಿಕ್ಷಣದ ಮೂಲಕ ಮಾನವ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಆಫ್ರಿಕಾದ ಪ್ರತಿಯೊಂದು ದೇಶವು ಸಮೃದ್ಧಿಯ ಹಾದಿಯಲ್ಲಿ ಸಾಗಬೇಕು ಎಂದಿರುವ ಗೇಟ್ಸ್‌, ತಮ್ಮ ಫೌಂಡೇಶನ್ ಪ್ರಾಥಮಿಕ ಆರೋಗ್ಯ ರಕ್ಷಣೆ, ವಿಶೇಷವಾಗಿ ತಾಯಿಯ ಮತ್ತು ಮಕ್ಕಳ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸಲಿದೆ. ಗರ್ಭಿಣಿಯಾಗುವ ಮೊದಲು, ಗರ್ಭಿಣಿಯಾದಾಗ ತಾಯಿಗೆ ಉತ್ತಮ ಆರೋಗ್ಯ ಮತ್ತು ಪೋಷಣೆ ದೊರೆತರೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ನಾವು ಕಲಿತಿದ್ದೇವೆ. ಮಕ್ಕಳಿಗೆ ಮೊದಲ ನಾಲ್ಕು ವರ್ಷಗಳಲ್ಲಿ ಉತ್ತಮ ಪೋಷಣೆ ಬಹಳ ಮುಖ್ಯ ಎಂದು ವಿವರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries