ನವದೆಹಲಿ: 2026ರ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ಸಾಧ್ಯವಾಗುತ್ತದೆ. ಫೆಬ್ರುವರಿಯಲ್ಲಿ ನಡೆಯಲಿರುವ ಮೊದಲ ಹಂತದ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿವಾಗಿರುತ್ತದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ತಮ್ಮ ಫಲಿತಾಂಶ ಉತ್ತಮಗೊಳಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ ನಿಗದಿಪಡಿಸಲಾದ ಎರಡನೇ ಹಂತದ ಪರೀಕ್ಷೆ ಐಚ್ಛಿಕವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (ಎನ್‌ಇಪಿ) ಶಿಫಾರಸು ಅನ್ವಯ 10ನೇ ತರಗತಿಗೆ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಮಾನದಂಡಗಳನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಅನುಮೋದಿಸಿದೆ.
'ಮೊದಲ ಹಂತದ ಪರೀಕ್ಷೆಯನ್ನು ಫೆಬ್ರುವರಿಯಲ್ಲಿ ಮತ್ತು ಎರಡನೇ ಹಂತದ ಪರೀಕ್ಷೆಯನ್ನು ಮೇ ತಿಂಗಳಿನಲ್ಲಿ ನಡೆಸಲಾಗುವುದು. ಎರಡೂ ಹಂತಗಳ ಫಲಿತಾಂಶಗಳನ್ನು ಕ್ರಮವಾಗಿ ಏಪ್ರಿಲ್ ಮತ್ತು ಜೂನ್‌ನಲ್ಲಿ ಪ್ರಕಟಿಸಲಾಗುವುದು' ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಹೇಳಿದ್ದಾರೆ.
'ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ಎರಡನೇ ಹಂತವು ಐಚ್ಛಿಕವಾಗಿರುತ್ತದೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷೆಗಳಲ್ಲಿ ಯಾವುದೇ ಮೂರು ವಿಷಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಸುಧಾರಿಸಿಕೊಳ್ಳಲು ಅವಕಾಶ ನೀಡಲಾಗುವುದು'ಎಂದು ಅವರು ಹೇಳಿದ್ದಾರೆ.
ಅನುಮೋದಿತ ಮಾನದಂಡಗಳ ಪ್ರಕಾರ, ಚಳಿಗಾಲದ ಋತುಮಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವ ಶಾಲೆಗಳ 10ನೇ ತರಗತಿಯ ವಿದ್ಯಾರ್ಥಿಗಳು ಯಾವುದೇ ಹಂತಗಳಲ್ಲಿ ಮಂಡಳಿಯ ಪರೀಕ್ಷೆಗಳಿಗೆ ಹಾಜರಾಗಲು ಆಯ್ಕೆಯನ್ನು ಹೊಂದಿರುತ್ತಾರೆ.
ಶೈಕ್ಷಣಿಕ ಅವಧಿಯಲ್ಲಿ ಆಂತರಿಕ ಮೌಲ್ಯಮಾಪನವನ್ನು ಒಮ್ಮೆ ಮಾತ್ರ ನಡೆಸಲಾಗುತ್ತದೆ.
ಸಿಬಿಎಸ್‌ಇ ಫೆಬ್ರುವರಿಯಲ್ಲಿ ಈ ಸಂಬಂಧ ಕರಡು ಮಾನದಂಡಗಳನ್ನು ಘೋಷಿಸಿತ್ತು. .




