ನವದೆಹಲಿ: ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯ ವಾತಾವರಣವಿದೆ ಎಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯು ತನ್ನ ಆಡಳಿತದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು 'ಸಂವಿಧಾನ ಹತ್ಯಾ ದಿವಸ' ನಾಟಕ ಮಾಡುತ್ತಿದೆ ಎಂದು ಬುಧವಾರ ಕಿಡಿಕಾರಿದ್ದಾರೆ.
ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೆ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿರುವ ಖರ್ಗೆ, ಸಹಬಾಳ್ವೆಯಿಲ್ಲದ, ಸಹೋದರತ್ವಕ್ಕೆ ಅವಕಾಶ ನೀಡದ ಹಾಗೂ ಸ್ವಾತಂತ್ರ್ಯವನ್ನು ಸಮೃದ್ಧಿಗೊಳಿಸದ ಸರ್ಕಾರಕ್ಕೆ ಬೇರೆಯವರಿಗೆ ಉಪದೇಶ ನೀಡುವ ಹಕ್ಕು ಇಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ಇಂದಿರಾ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ, 'ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ, ಸಂವಿಧಾನ ರಚನೆಯಲ್ಲಿ ಯಾವುದೇ ಕೊಡುಗೆ ನೀಡದ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ್ದ ಬಿಜೆಪಿ-ಆರ್‌ಎಸ್‌ಎಸ್‌ನವರು, ತುರ್ತು ಪರಿಸ್ಥಿತಿ ಕುರಿತು ಅದು ಜಾರಿಯಾಗಿ 50 ವರ್ಷಗಳು ಕಳೆದ ನಂತರ ಟೀಕೆ ಮಾಡುತ್ತಿದ್ದಾರೆ' ಎಂದು ಕುಟುಕಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅವರ ಆಡಳಿತದಲ್ಲಿ ಸಂವಿಧಾನವು ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿರುವ ಖರ್ಗೆ, ಮುಕ್ತವಾಗಿ ಮಾತನಾಡುವ ಹಾಗೂ ಪ್ರತಿಭಟಿಸುವ ಸ್ವಾತಂತ್ರ್ಯವೇ ಉಳಿದಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ-ಆರ್‌ಎಸ್‌ಎಸ್‌ನವರು ಸಂವಿಧಾನವನ್ನು ತಿರಸ್ಕರಿಸಿದ್ದರು. ಮನುಸ್ಮೃತಿಯಲ್ಲಿರುವಂತ ತಮ್ಮ ಸಾಂಸ್ಕೃತಿಕ ಅಂಶಗಳನ್ನು ಅದರಲ್ಲಿ ಇಲ್ಲ ಎಂದು ಹೇಳಿದ್ದರು. ಆದರೆ, ಈಗ ಸಂವಿಧಾನ ಉಳಿಸುವ ಮಾತುಗಳನ್ನಾಡುತ್ತಿದ್ದಾರೆ ಎಂದಿದ್ದಾರೆ.
'ಈ ಜನರು (ಬಿಜೆಪಿ, ಆರ್‌ಎಸ್‌ಎಸ್‌ನವರು) ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ. ಸಾರ್ವಜನಿಕರು ಹಣದುಬ್ಬರದಿಂದ ತತ್ತರಿಸಿದ್ದಾರೆ. ನಿರುದ್ಯೋಗ, ಭ್ರಷ್ಟಾಚಾರ ಹಾಗೂ ಆರ್ಥಿಕ ವೈಫಲ್ಯಗಳ ಬಗ್ಗೆ ಸರ್ಕಾರದ ಬಳಿ ಉತ್ತರಗಳೇ ಇಲ್ಲ. ಅವರ ಸುಳ್ಳುಗಳು ಮತ್ತು ಲೋಪಗಳನ್ನು ಮುಚ್ಚಿಕೊಳ್ಳಲು ಈ (ಸಂವಿಧಾನ ಹತ್ಯಾ ದಿವಸ) ನಾಟಕ ಮಾಡುತ್ತಿದ್ದಾರೆ' ಎಂದು ತಿವಿದಿದ್ದಾರೆ.




