ಬದಿಯಡ್ಕ: ನಾಡೋಜ ಕಯ್ಯಾರ ಕಿಞ್ಞಣ್ಣ ರೈಗಳು ನಾಡು-ನುಡಿಗೆ ಸಲ್ಲಿಸಿದ ಬಹುಮುಖ ಸೇವೆ ಅನನನ್ಯವಾದುದು. ಸ್ವಾತಂತ್ರ್ಯ ಹಾಗೂ ಕನ್ನಡ ಹೋರಾಟ, ಪ್ರಗತಿಪರ ಕೃಷಿಕ, ಆದರ್ಶ ಅಧ್ಯಾಪಕ, ಜನಪರ ಆಡಳಿತ ನೇತಾರನಾಗಿ ದಿ.ಕಯ್ಯಾರರ ಹೆಸರಲ್ಲಿ ಕವಿತಾ ಕುಟೀರದ ಸನಿಹ ನಿರ್ಮಿಸಲಾಗುತ್ತಿರುವ ಕನ್ನಡ ಭವನ ಶೀಘ್ರ ನಾಡಿಗೆ ಸಮರ್ಪಣೆಯಾಗಲಿದೆ ಎಂದು ಕರ್ನಾಟಕ ಸರ್ಕಾರದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈಗಳ ನಿವಾಸ ಕವಿತಾ ಕುಟೀರದಲ್ಲಿ ಭಾನುವಾರ ಬೆಳಿಗ್ಗೆ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಆಯೋಜಿಸಿದ್ದ ಕಯ್ಯಾರರ 110ನೇ ಜನ್ಮ ದಿನಾಚರಣೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕವಿ ಕಯ್ಯಾರರು ಮುನ್ನಡೆಸಿದ ಕನ್ನಡ-ತುಳು ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಹೊಣೆ ಹೊಸ ಸಮಾಜದ ಕರ್ತವ್ಯವಾಗಿದೆ. ಕವಿ ಬದುಕಿದ ಆದರ್ಶ ಜೀವನ ನಮ್ಮೆಲ್ಲರಿಗೂ ಪ್ರೇರಣದಾಯಿಯಾಗಿದ್ದು, ಅವರ ಕಾವ್ಯ ಹರಿದ ನಮ್ಮ ನೆಲ ಪಾವನವಾದುದು. ಮೇಲು-ಕೀಳುಗಳನ್ನು ಮೆಟ್ಟಿನಿಂತು ವ್ಯಾಪಕ ಕಾರ್ಯಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಅವರ ಜೀವನಾದರ್ಶ ಎಂದಿಗೂ ಚೇತೋಹಾರಿಯಾದುದು ಎಂದವರು ನೆನಪಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬದಿಯಡ್ಕ ಗ್ರಾ.ಪಂ.ಮಾಜಿ ಉಪಾಧ್ಯಕ್ಷ, ಸಮಾಜ ಸೇವಕ ಮಾಹಿನ್ ಕೇಳೋಟ್ ಮಾತನಾಡಿ, ಕಯ್ಯಾರರು ಸುಧೀರ್ಘ ಕಾಲಗಳ ವರೆಗೆ ಅಧ್ಯಕ್ಷರಾಗಿ ಮುನ್ನಡೆಸಿದ ಬದಿಯಡ್ಕ ಗ್ರಾ.ಪಂ. ಆಡಳಿತ ಕಾಲಾವಧಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಅಭಿವೃದ್ಧಿ ಪರ್ವಗಳ ಮಹತ್ವಿಕೆಯುಳ್ಳದ್ದು ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಕಯ್ಯಾರರ ಬದುಕು-ಬರಹಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಕುಂಬ್ಡಾಜೆ ಗ್ರಾ.ಪಂ.ಸದಸ್ಯ ಹರೀಶ್ ಗೋಸಾಡ, ಹಿರಿಯ ವೈದ್ಯ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಶಿಕ್ಷಕ ನಿರಂಜನ ರೈ ಪೆರಡಾಲ, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಕಯ್ಯಾರರ ಸುಪುತ್ರ ಪ್ರದೀಪ್ ರೈ ಕಯ್ಯಾರು, ಆರತಿ ಪಿ.ರೈ ಕಯ್ಯಾರು ಮಾತನಾಡಿದರು. ಕಾರ್ಯನಿರತ ಕನ್ನಡ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರವಿ ನಾಯ್ಕಾಪು ಸ್ವಾಗತಿಸಿ, ಸುಶ್ಮಿತಾ ಗೋಸಾಡ ವಂದಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಕಾರ್ಯಕ್ರಮ ನಿರೂಪಿಸಿದರು.

.jpg)
.jpg)

