ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೇರಿದಾಗಿನಿಂದ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ ಎಂದು ಕಾಂಗ್ರೆಸ್ ಪಕ್ಷ ಸೋಮವಾರವೂ ವಾಗ್ದಾಳಿ ನಡೆಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಅಧಿಕಾರಕ್ಕೇರಿ 11 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೊದಲ 'ಮುಕ್ತ, ಪೂರ್ವನಿರ್ಧರಿತವಲ್ಲದ' ಪತ್ರಿಕಾಗೋಷ್ಠಿ ನಡೆಸುವಂತೆ ಮೋದಿ ಅವರಿಗೆ ನಮ್ಮ ಪಕ್ಷವು ಭಾನುವಾರ ಸವಾಲು ಹಾಕಿತ್ತು' ಎಂದು ತಿಳಿಸಿದ್ದಾರೆ.
'ಸರ್ಕಾರದ 11 ವರ್ಷಗಳ ಸಾಧನೆಗಳ ಮೇಲೆ ಬೆಳಕು ಚೆಲ್ಲಲು ಇಂದು ಮಧ್ಯಾಹ್ನ 12ಕ್ಕೆ ಪ್ರತಿಕಾಗೋಷ್ಠಿ ನಡೆಸುವುದಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಪತ್ರಿಕಾಗೋಷ್ಠಿ ನಡೆಸುವುದರಿಂದ ಪ್ರಧಾನಿ ಮೋದಿ ದೂರ ಓಡುತ್ತಿರುವುದು ಏಕೆ? ಅಥವಾ ಪ್ರಶ್ನೋತ್ತರಗಳನ್ನು ಸಿದ್ಧಪಡಿಸಿಕೊಳ್ಳಲು ಹಾಗೂ ಗುಲಾಮರಂತೆ ಪ್ರಶ್ನೆಗಳನ್ನು ಕೇಳಲು ಸೂಕ್ತ ವ್ಯಕ್ತಿಗಳನ್ನು ಹುಡುಕಲು ಸಮಯ ಬೇಕಾಗುತ್ತದೆಯೇ? ಅಥವಾ ಭಾರತ ಮಂಟಪಂ ಇನ್ನೂ ಸಜ್ಜಾಗಿಲ್ಲವೇ' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
'ಜಗತ್ತಿನಾದ್ಯಂತ ನಾಯಕರು ಕಾಲ ಕಾಲಕ್ಕೆ ಮುಕ್ತ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಾರೆ. ಆದರೆ, ನಮ್ಮಲ್ಲಿ ಕಳೆದ 11 ವರ್ಷಗಳಲ್ಲಿ ಇಂಥ ಒಂದೇ ಒಂದು ಪ್ರಯತ್ನವೂ ನಡೆದಿಲ್ಲ' ಎಂದು ಜೈರಾಮ್ ಭಾನುವಾರ ಹೇಳಿದ್ದರು.
'ನರೇಂದ್ರ ಮೋದಿ ಅವರು ಕಳೆದ ವರ್ಷ ಚುನಾವಣಾ ಪ್ರಚಾರ ಸಮಾವೇಶದ ಸಂದರ್ಭದಲ್ಲಿ ತಮ್ಮ ಮಾಧ್ಯಮ ಸಂವಾದವನ್ನು ತಾವೇ ಚಿತ್ರಕತೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರು. ಅದರಲ್ಲಿ ತಾವು ಜೈವಿಕವಾಗಿ ಜನಿಸಿದವರಲ್ಲ ಎಂದು ಹೇಳಿಕೊಂಡಿದ್ದರು. ಆದರೆ, ಮುಕ್ತವಾಗಿ ಪತ್ರಿಕಾಗೋಷ್ಠಿ ನಡೆಸುವ ಧೈರ್ಯ ಮೋದಿಯವರಲ್ಲಿ ಇಲ್ಲ' ಎಂದು ಕುಟುಕಿದ್ದರು.
ಈ ಸಂಬಂಧ ಬಿಜೆಪಿಯಾಗಲೀ, ಕೇಂದ್ರ ಸರ್ಕಾರವಾಗಲೀ ಸದ್ಯಕ್ಕೆ ಯಾವುದೇ ಪ್ರತಿಕ್ರಿಯಿಸಿಲ್ಲ.




