ತಿನ್‌ಸುಕಿಯಾ: ಅಸ್ಸಾಂ-ಅರುಣಾಚಲ ಗಡಿಯಲ್ಲಿ ಭಾರಿ ಮಳೆಯಿಂದಾಗಿ ಉಕ್ಕಿ ಹರಿಯುತ್ತಿದ್ದ ಬೊಮ್ಜಿರ್ ನದಿಯಲ್ಲಿ ಸಿಲುಕಿದ್ದ 14 ಮಂದಿಯನ್ನು ಭಾರತೀಯ ವಾಯುಪಡೆ (ಐಎಎಫ್) ಇಂದು ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿನ್‌ಸುಕಿಯಾ ಜಿಲ್ಲಾಧಿಕಾರಿ ಸ್ವಪ್ನಿಲ್ ಪಾಲ್ ಅವರ ಕೋರಿಕೆಯ ಮೇರೆಗೆ ಭಾರತೀಯ ವಾಯುಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿತು ಎಂದು ಅವರು ಹೇಳಿದ್ದಾರೆ.
ಹೆಲಿಕಾಪ್ಟರ್ ನೆರವಿನಿಂದ ನದಿಯಲ್ಲಿ ಸಿಲುಕಿದ್ದ ಎಲ್ಲ 14 ಮಂದಿಯನ್ನು ರಕ್ಷಿಸಲಾಗಿದೆ. ಅಸ್ಸಾಂನ ತಿನ್‌ಸುಕಿಯಾ ಜಿಲ್ಲೆಯ 13 ಮಂದಿ ಅರುಣಾಚಲ ಪ್ರದೇಶದ ಒಬ್ಬರನ್ನು ರಕ್ಷಿಸಲಾಗಿದೆ. ಅವರೆಲ್ಲರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ.
ಈ ಪ್ರದೇಶದಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿತ್ತು. 14 ಮಂದಿ ಸಿಲುಕಿರುವ ಸುದ್ದಿ ತಿಳಿದ ತಕ್ಷಣ ಜಿಲ್ಲಾಡಳಿತವು ಅರುಣಾಚಲ ಪ್ರದೇಶದ ಅಧಿಕಾರಿಗಳೊಂದಿಗೆ ತ್ವರಿತವಾಗಿ ಸಮನ್ವಯ ಸಾಧಿಸಿ ರಕ್ಷಣಾ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿತ್ತು.
ಸಾದಿಯಾ ಕಂದಾಯ ವೃತ್ತ ಅಧಿಕಾರಿ ಜೈದೀಪ್ ರಜಾಕ್ ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದರು. ಭಾರತೀಯ ವಾಯುಪಡೆಯ ನೆರವಿಗಾಗಿ ಅವರು ಧನ್ಯವಾದ ಸಲ್ಲಿಸಿದ್ದಾರೆ.




