HEALTH TIPS

ಭಯೋತ್ಪಾದನೆ ವಿರುದ್ಧ ಹೋರಾಟ: ಬ್ರೆಜಿಲ್ ತಲುಪಿದ ತರೂರ್ ನೇತೃತ್ವದ ನಿಯೋಗ

ಬ್ರೆಸಿಲಿಯಾ: ಭಯೋತ್ಪಾದನೆ ವಿರುದ್ಧದ ತನ್ನ ನಿಲುವನ್ನು ತಿಳಿಸುವ ಸಲುವಾಗಿ ಹಾಗೂ ಉಗ್ರ ಚಟುವಟಿಕೆಗಳಿಗೆ ಪ್ರಾಯೋಜಕತ್ವ ವಹಿಸಿರುವ ಪಾಕಿಸ್ತಾನದ ಮುಖವಾಡವನ್ನು ಕಳಚುವ ನಿಟ್ಟಿನಲ್ಲಿ ರಚಿಸಲಾಗಿರುವ ಸರ್ವಪಕ್ಷಗಳ ಸಂಸದರನ್ನೊಳಗೊಂಡ ನಿಯೋಗ ಬ್ರೆಜಿಲ್‌ ತಲುಪಿದೆ.

ಕೊಲಂಬಿಯಾದಿಂದ ಭಾನುವಾರ ಆಗಮಿಸಿರುವ ನಿಯೋಗವನ್ನು ಬ್ರೆಜಿಲ್‌ನಲ್ಲಿರುವ ರಾಜತಾಂತ್ರಿಕ ಅಧಿಕಾರಿ ಸಂದೀಪ್‌ ಕುಮಾರ್‌ ಕುಜುರ್‌ ಅವರು ನಗರದ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್‌ ನೇತೃತ್ವದ ನಿಯೋಗವು ಈ ಭೇಟಿ ಸಮಯದಲ್ಲಿ ಬ್ರೆಜಿಲ್‌ ಅಧ್ಯಕ್ಷರ ಮುಖ್ಯ ಸಲಹೆಗಾರ ಸೆಲ್ಸೊ ಅಮೊರಿಮ್‌, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮರಿಯಾ ಲೌರಾ ಡಾ ರೋಚಾ, ಸೆನೆಟರ್‌ ನೆಲ್ಸನ್‌ ಟ್ರಾಡ್‌ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಲಿದೆ ಎಂದು ರಾಯಭಾರ ಕಚೇರಿಯು ಎಕ್ಸ್‌ನಲ್ಲಿ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನಾಪಡೆಗಳು ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕ್‌ ಸೇನೆ ಗಡಿಯುದ್ದಕ್ಕೂ ದಾಳಿ ನಡೆಸಿತ್ತು. ಇದರಿಂದಾಗಿ, ಉಭಯ ರಾಷ್ಟ್ರಗಳ ನಡುವೆ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ, ಕದನ ವಿರಾಮ ಒಪ್ಪಂದ ಜಾರಿಯಲ್ಲಿದೆ.

ಇದೀಗ, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಬಯಲು ಮಾಡುವ ಸಲುವಾಗಿ, ಕೇಂದ್ರ ಸರ್ಕಾರವು ಸರ್ವಪಕ್ಷಗಳ ಸಂಸದರನ್ನೊಳಗೊಂಡ ವಿವಿಧ ನಿಯೋಗಗಳನ್ನು ರಚಿಸಿದೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ಹೊಂದಿರುವ ದೃಢ ನಿಲುವನ್ನು ನಿಯೋಗವು ಅಂತರರಾಷ್ಟ್ರೀಯ ಸಮುದಾಯಕ್ಕೆ ತಿಳಿಸಿಕೊಡಲಿದೆ. ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಹೊಂದಿರುವ ಅಸಹಿಷ್ಣುತೆಯ ನೀತಿಯನ್ನು ಪುನರುಚ್ಚರಿಸಲಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries