ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ವ್ಯಕ್ತಿ ಮೃತಪಟ್ಟಿದ್ದರು. ಆ ಬಳಿಕ ಭದ್ರತಾ ಕಾರಣಗಳಿಗಾಗಿ 40ಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿತ್ತು.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಬೆತಾಬ್ ಕಣಿವೆ, ಪಹಲ್ಗಾಮ್‌ನಲ್ಲಿರುವ ಉದ್ಯಾನಗಳು, ವೆರಿನಾಗ್ ಉದ್ಯಾನ, ಕೊಕರ್ನಾಗ್ ಉದ್ಯಾನ, ಅಚಾಬಲ್ ಉದ್ಯಾನ ಸೇರಿ 16 ತಾಣಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಭದ್ರತಾ ಪರಿಶೀಲನೆ ಬಳಿಕ ಉಳಿದ ತಾಣಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.
ಪ್ರವಾಸಿ ತಾಣಗಳನ್ನು ಮುಕ್ತಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಭಯೋತ್ಪಾದಕ ದಾಳಿಯ ಬಳಿಕ ಪ್ರವಾಸಿಗರಲ್ಲಿ ಆತಂಕ ನಿವಾರಿಸುವ ಮತ್ತು ಪುನಃ ವಿಶ್ವಾಸವನ್ನು ಮೂಡಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ ಎಂದು ಪ್ರವಾಸ ನಿರ್ವಾಹಕರು ಹೇಳುತ್ತಾರೆ.
'ಪ್ರವಾಸಿಗರು ಭದ್ರತೆ, ಸುರಕ್ಷತೆ ಕುರಿತು ಹೇಳಿಕೆಗಳಿಗಿಂತ ಹೆಚ್ಚಿನದ್ದನ್ನು ಬಯಸುತ್ತಾರೆ. ತ್ವರಿತವಾಗಿ ಸ್ಪಂದಿಸುವ ತಂಡಗಳು, ಕಟ್ಟುನಿಟ್ಟಾದ ಬಂದೋಬಸ್ತ್ ವ್ಯವಸ್ಥೆ ಗೋಚರಿಸುವಂತಿರಬೇಕು ಎಂದು ಅವರು ನಿರೀಕ್ಷಿಸುತ್ತಾರೆ' ಎಂದು ಅವರು ತಿಳಿಸುತ್ತಾರೆ.




