ಕಾಸರಗೋಡು: ಫೇಸ್‍ಬುಕ್ ಮೂಲಕ ಪರಿಚಯಮಾಡಿಕೊಂಡು, ತಂಡವೊಂದು ಮುಳಿಯಾರಿನ ಯುವಕರೊಬ್ಬರಿಂದ ಭರೋಬ್ಬರಿ 19.36ಲಕ್ಷ ರೂ. ಎಗರಿಸಿದೆ. ಮುಳಿಯಾರು ನಿವಾಸಿ ಕೆ.ಟಿ ಶಿನೋಜ್ ಕುಮಾರ್(37)ಅವರ ದೂರಿನ ಮೇರೆಗೆ ಕಾಸರಗೋಡು ಕ್ರೈಂ ಬ್ರಾಂಚ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಫೇಸ್‍ಬುಕ್ ಮೆಸೆಂಜರ್ ಮೂಲಕ ಪರಿಚಯಮಾಡಿಕೊಂಡಿದ್ದ ತಂಡ, ಪ್ಲಸ್-500, ಗ್ಲೋಬಲ್ ಸಿಎಸ್ ಎಂಬ ಕಂಪೆನಿಯ ಟ್ರೇಡಿಂಗ್ ನಡೆಸಿದಲ್ಲಿ, ಹೆಚ್ಚಿನ ಲಾಭಾಂಶ ಲಭಿಸುವುದಾಗಿ ನಂಬಿಕೆ ಬರಿಸಿ ತನ್ನಿಂದ 2025 ಫೆ. 25ರಿಂದ ಮೇ 29ರ ವರೆಗೆ ವಿವಿಧ ದಿನಗಳಲ್ಲಾಗಿ 19,36000 ರೂ. ಪಡೆದು ವಂಚಿಸಿರುವುದಾಗಿ ಶಿನೋಜ್‍ಕುಮಾರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ವಾಟ್ಸಪ್ ಮೂಲಕ ಲಿಂಕ್ ಕಳುಹಿಸಿಕೊಟ್ಟಿದ್ದು, ನಂತರ ಟೆಲಿಗ್ರಾಮ್ ಮೂಲಕ ಮಾಹಿತಿ ಹಸ್ತಾಂತರಿಸಿದ್ದರು. ನಂತರ ಆರೋಪಿಗಳು ಕಳುಹಿಸಿಕೊಟ್ಟಿರುವ ವಿವಿಧ ಬ್ಯಾಂಕ್ ಖಾತೆಗೆ ಹಣ ರವಾನಿಸಿಕೊಡಲಾಗಿದ್ದು, ನಂತರ ಯಾವುದೇ ಪ್ರತಿಕ್ರಿಯೆ ಲಭ್ಯವಾಗದ ಹಿನ್ನೆಲೆಯಲ್ಲಿ ವಂಚನೆಗೀಡಾಗಿರುವುದು ಮನವರಿಕೆಯಾಗಿರುವುದಾಗಿ ಶಿನೋಜ್ ತಿಳಿಸಿದ್ದಾರೆ.




