ಪೆರ್ಲ: ಪೆರ್ಲ ಸಮೀಪದ ಬೆದ್ರಂಪಳ್ಳದಲ್ಲಿ ಹಿಂದೂ ಗೃಹಣಿ ಸಹಿತ ಇಬ್ಬರು ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಪರಿಶಿಷ್ಟ ಪಂಗಡದ ಹಿಂದು ಮಹಿಳೆಯೊಬ್ಬರನ್ನು ಎರಡು ಮಕ್ಕಳ ಸಹಿತ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಮಲಯಾಳಿ ವ್ಯಕ್ತಿ ನಡೆಸಿದ ಪ್ರಯತ್ನ ಪೊಲೀಸರ ಮಧ್ಯಸ್ಥಿಕೆಯಿಂದ ವಿಫಲಗೊಂಡಿದೆ.
ದಕ್ಷಿಣದ ಕೇರಳದಿಂದ ರಬ್ಬರ್ ಟ್ಯಾಪಿಂಗ್ ಕೆಲಸಕ್ಕಾಗಿ ಆಗಮಿಸಿದ್ದ ವ್ಯಕ್ತಿಯೊಬ್ಬ, ಈ ಮಹಿಳೆಯ ಬಡತನವನ್ನು ಬಂಡವಾಳವಾಗಿಸಿಕೊಂಡು ಆಕೆಯೊಂದಿಗೆ ಪ್ರೀತಿಯ ಸೋಗಿನಲ್ಲಿ ಆಸ್ತಿ, ಹಣ ಹಾಗೂ ವೈಭೋಗದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನಿಸಿದ್ದಾನೆ. ಈತನ ಬಣ್ಣದ ಮಾತಿಗೆ ಬಲಿಯಾದ ಮಹಿಳೆ ತನ್ನ ಗಂಡ ಮತ್ತು ಕುಟುಂಬದಿಂದ ದೂರಾಗಿ, ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಬದಿಯಡ್ಕ ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯಳಾಗಿದ್ದ ಈ ಮಹಿಳೆ, ಮತಾಂತರ ಯತ್ನ ನಡೆಸಿದ ಆರೋಪಿಯ ಸಂಪರ್ಕಕ್ಕೆ ಸಿಲುಕಿದ ಬಳಿಕ ಅವಳ ನಡತೆಗಳಲ್ಲಿ ಹೆಚ್ಚಿನ ಬದಲಾವಣೆ ಉಂಟಾಗಿದ್ದು ಹಿಂದೂ ಧರ್ಮ, ಕುಟುಂಬ ಮತ್ತು ಸಮುದಾಯದಿಂದ ದೂರ ಉಳಿಯಲು ಆರಂಭಿಸಿದ್ದಳು.
ಮಗನನ್ನು ಸ್ಥಳೀಯ ಖಾಸಗಿ ಶಾಲೆಯಿಂದ ಬಿಡಿಸಿ, ದೂರದ ಕಾನ್ವೆಂಟ್ ಶಾಲೆಗೆ ಸೇರಿಸುವ ನೆಪದಲ್ಲಿ ವರ್ಗಾವಣಾ ಪತ್ರ ಪಡೆದುಕೊಂಡಿದ್ದಳು. ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬದಿಯಡ್ಕ ಠಾಣೆ ಪೊಲೀಸರು ಮಹಿಳೆ ಹಾಗೂ ಮಕ್ಕಳನ್ನು ಶಿವಮೊಗ್ಗದ ಸಮೀಪದಿಂದ ಪತ್ತೆ ಹಚ್ಚಿ ಕರೆತಂದಿದ್ದರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮಹಿಳೆಯು ತಮ್ಮ ಮನೆಯವರೊಂದಿಗೆ ತೆರಳುವ ಇಚ್ಛೆ ವ್ಯಕ್ತಪಡಿಸಿರುವುದರಿಂದ ಪ್ರಕರಣ ತಾತ್ಕಲಿಕ ಸುಖಾಂತ್ಯ ಕಂಡಿದೆ.




