ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳು ತೀವ್ರಗೊಂಡಿರುವ ಹೊತ್ತಿನಲ್ಲಿಯೇ ಈ ಭಾರಿ ಪ್ರಮಾಣದ ಏರಿಕೆ ಕಂಡು ಬಂದಿದ್ದು, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆಗಳು ಜುಲೈ 9ರ ವೇಳೆಗೆ ಅಂತಿಮ ಘಟ್ಟಕ್ಕೆ ತಲುಪಬಹುದು ಎಂದು ನಿರೀಕ್ಷಿಸಲಾಗಿದೆ.
ವಾಣಿಜ್ಯ ಗುಪ್ತಚರ ಮತ್ತು ಸಾಂಖ್ಯಿಕ ಪ್ರಧಾನ ನಿರ್ದೇಶನಾಲಯ (DGCIS) ಪ್ರಕಾರ, ಕಳೆದ ವರ್ಷದ 1.61 ದಶಲಕ್ಷ ಟನ್ ಕಚ್ಛಾ ತೈಲ ಆಮದಿಗೆ ಹೋಲಿಸಿದರೆ, 2025ರ ಮೊದಲ ನಾಲ್ಕು ತಿಂಗಳಲ್ಲಿ ಅಮೆರಿಕದಿಂದ ಭಾರತ ಆಮದು ಮಾಡಿಕೊಂಡಿರುವ ಕಚ್ಛಾ ತೈಲದ ಪ್ರಮಾಣ 6.31 ದಶಲಕ್ಷ ಟನ್ ಗೆ ಏರಿಕೆಯಾಗಿದೆ ಎನ್ನಲಾಗಿದೆ. ಆ ಮೂಲಕ, ಭಾರತದ ಒಟ್ಟು ಕಚ್ಛಾ ತೈಲ ಆಮದಿನ ಪೈಕಿ, ಅಮೆರಿಕದಿಂದ ಆಮದಾಗುತ್ತಿದ್ದ ಕಚ್ಛಾ ತೈಲದ ಪ್ರಮಾಣ ಕಳೆದ ವರ್ಷ ಶೇ. 2ರಷ್ಟು ಮಾತ್ರ ಇದ್ದದ್ದು, 2025ರ ಮೊದಲ ನಾಲ್ಕು ತಿಂಗಳಲ್ಲಿ ಶೇ. 7ಕ್ಕೆ ಏರಿಕೆಯಾಗಿದೆ.
ಮತ್ತೊಂದು ರೀತಿಯಲ್ಲಿ, ಕಳೆದ ವರ್ಷ ಸುಮಾರು ಒಂದು ಶತಕೋಟಿ ಡಾಲರ್ ಮೌಲ್ಯದಷ್ಟು ಕಚ್ಛಾ ತೈಲವನ್ನು ಮಾತ್ರ ಆಮದು ಮಾಡಿಕೊಂಡಿದ್ದ ಭಾರತ, 2025ರ ಮೊದಲ ನಾಲ್ಕು ತಿಂಗಳಲ್ಲೇ 3.78 ಶತಕೋಟಿ ಡಾಲರ್ ಮೌಲ್ಯದಷ್ಟು ಕಚ್ಛಾ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಲಾಗಿದೆ. ಈ ಭಾರಿ ಪ್ರಮಾಣದ ಏರಿಕೆಯಲ್ಲಿ ಕಚ್ಛಾತೈಲ ಬೆಲೆಯ ಏರುಪೇರು ಮಹತ್ವದ ಪಾತ್ರ ವಹಿಸಿದೆ ಎಂದೂ ಈ ವರದಿಯಲ್ಲಿ ಹೇಳಲಾಗಿದೆ.
ಪ್ರಾದೇಶಿಕ ಉದ್ವಿಗ್ನತೆಯ ನಡುವೆ ಈ ಕ್ರಮವು ಭಾರತಕ್ಕೆ ಪಶ್ಚಿಮ ಏಷ್ಯಾದ ಇತರ ತೈಲ ಪೂರೈಕೆ ರಾಷ್ಟ್ರಗಳ ಮೇಲೆ ಹತೋಟಿಯನ್ನು ಸಾಧಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ, ಭಾರತವು ತನ್ನ ಕಚ್ಛಾ ತೈಲ ಅಗತ್ಯಗಳಲ್ಲಿ 88% ಕ್ಕಿಂತ ಹೆಚ್ಚನ್ನು ಆಮದು ಮಾಡಿಕೊಳ್ಳುವ ಮೂಲಕ ಪೂರೈಸುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಚ್ಛಾ ತೈಲ ಹೊಂದಾಣಿಕೆಯನ್ನು ಸಾರ್ವಜನಿಕವಾಗಿ ಅನುಮೋದಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ದ್ವಿಪಕ್ಷೀಯ ವ್ಯಾಪಾರ ಅಂತರವನ್ನು ಕಡಿಮೆ ಮಾಡಲು, ಅಮೆರಿಕವು ಭಾರತದ ಪ್ರಮುಖ ತೈಲ ಮತ್ತು ಅನಿಲ ಪೂರೈಕೆದಾರನಾಗಲಿದೆ ಎಂದು ಟ್ರಂಪ್ ಭರವಸೆ ನೀಡಿದ್ದರು.




