ಬದಿಯಡ್ಕ: ಕರಾವಳಿಯಾದ್ಯಂತ ಒಂದೊಂದು ದೇವಸ್ಥಾನಗಳೂ ಒಂದೊಂದು ರೀತಿಯ ಸೇವೆ, ವಿಧಿವಿಧಾನಗಳಿಂದ ಜನಜನಿತವಾಗಿದೆ. ಈ ದೇವಸ್ಥಾನ ತನ್ನದೇ ಆದ ವಿಶೇಷತೆಯಿಂದ ಗಮನ ಸೆಳೆಯುತ್ತದೆ. ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ಎಲ್ಲಾ ದೇವಸಾಸ್ಥನಗಳಿಗಿಂತ ಭಿನ್ನವಾಗಿ ಕಾರ್ತಿಕ ಮಾಸದ "ಹಲಸಿನ ಹಣ್ಣಿನ ಅಪ್ಪ ಸೇವೆ' ವಿಶೇಷವಾಗಿದ್ದು, ಗಮನಾರ್ಹವಾಗಿದೆ.
ಕಳೆದ 70 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಆಚರಣೆ "ಹಲಸಿನ ಹಣ್ಣಿನ ಅಪ್ಪ ಸೇವೆ' ಜೂನ್ 15 ರಿಂದ ಜುಲೈ 15 ರೊಳಗೆ ನಡೆಯಲೇ ಬೇಕಾದ ಸೇವೆ. ಈ ಬಾರಿ ಜೂನ್ 29 ರಂದು ಭಾನುವಾರ ವಿವಿಧ ಆಚರಣೆಗೆಗಳೊಂದಿಗೆ ನಡೆಯಲಿದೆ. ಅತ್ಯುತ್ತಮ ಹಲಸಿನ ಹಣ್ಣನ್ನು ಅರ್ಪಿಸುವ ಮೂಲಕ ಹಲಸಿನ ಹಣ್ಣಿನ ಸೇವೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಕ್ಕಿ ಹುಡಿ, ತುಪ್ಪ, ತೆಂಗಿನ ಕಾಯಿ, ಬೆಲ್ಲ, ಏಲಕ್ಕಿ, ಹಲಸಿನ ಹಣ್ಣಿನ ಸೊಳೆಗಳ ಪಾಕದಲ್ಲಿ 'ಅಪ್ಪ' ಸಿದ್ಧಗೊಳ್ಳುತ್ತದೆ. ದೇವರ ಸಮ್ಮುಖದಲ್ಲಿ ನಡೆಯುವ ಅಪ್ಪ ಸೇವೆಯ ಸಂದರ್ಭದಲ್ಲಿ ಭಕ್ತಾದಿಗಳು ಹಲಸಿನ ಮಹಿಮೆಯನ್ನು ಶ್ರದ್ಧಾಭಕ್ತಿಗಳೊಮದಿಗೆ ಕೊಂಡಾಡುತ್ತಾರೆ.
ಹಳ್ಳಿಗಳಲ್ಲಿ ಧಾರಾಳ ಲಭ್ಯವಿರುವ ಈ ಫಲ ವಸ್ತುವಿನ ಎಲ್ಲಾ ಭಾಗಗಳು ನಾನಾ ರೀತಿಯಲ್ಲಿ ಆಹಾರವಾಗಿ ಹಾಗೂ ತರಕಾರಿಯಾಗಿ ಬಳಸಲ್ಪಡುತ್ತದೆ. ಗತ ಕಾಲದಲ್ಲಿ ಆಹಾರ ವಸ್ತುಗಳ ಕೊರತೆ ಅನುಭವಿಸಿದ ಸಂದರ್ಭದಲ್ಲಿ ಹಲಸಿನ ಹಣ್ಣು ತಿಂದು ಹೊಟ್ಟೆ ತುಂಬಿಸುತ್ತಿದ್ದ ಸ್ಮರಣೆಯಿಂದ ಈ ಸೇವೆ ಆಚರಿಸಲ್ಪಡುತ್ತಿದೆ ಎನ್ನುತ್ತಾರೆ ಏತಡ್ಕದ ಚಂದ್ರಶೇಖರ್ ಅವರು.
ಊಟಕ್ಕೆ ತತ್ವಾರ ಉಂಟಾದಾಗ ಮನೆಗೆ ಬಂದ ಅತಿಥಿಗಳಿಗೆ ರುಚಿಯಾದ ಹಣ್ಣಿನ ಸೊಳೆ ನೀಡಿ ಊಟದ ತಟ್ಟೆ ಇಟ್ಟಾಗ ಒಂದಿಷ್ಟು ಗಂಜಿ ಸಾಕಾಗಿ ಮನೆ ಮರ್ಯಾದೆ ಉಳಿದ ಘಟನೆಯನ್ನು ತಾಯಿಯೊಬ್ಬರು ದೇವಸ್ಥಾನದ ನಡೆಯಲ್ಲಿ ನೆನೆಸಿದಾಗಿ ಅವರು ಹೇಳುತ್ತಾರೆ.
ಹಳ್ಳಿಗಳಲ್ಲಿ ತೀವ್ರ ಬಡತನ ಎದುರಿಸುತ್ತಿದ್ದ ಕಾಲದಲ್ಲಿ ಆಹಾರ ಭದ್ರತೆ ನೀಡಿದ ಹಲಸಿನ ಹಣ್ಣನ್ನು ದೇವರಿಗೆ ಒಪ್ಪಿಸಿ ನಮೋ..ನಮೋ.. ಹೇಳಿವುದು ರೂಢಿ.
ಹಿನ್ನೆಲೆ : 1940 ರಷ್ಟು ಹಿಂದೆ ಏತಡ್ಕ ಸಮೀಪದ ಪಡ್ರೆ ಗ್ರಾಮದಲ್ಲಿರುವ ಈ ದೇವಸ್ಥಾನದ ಮೂಡು ಭಾಗದಲ್ಲಿ ಪ್ರದಕ್ಷಿಣಾಕಾರದಲ್ಲಿ ಹರಿದು ಪಳ್ಳತ್ತಡ್ಕ ದಾರಿಯಾಗಿ ಕುಂಬಳೆ ಸೇರುವ ನದಿಯಲ್ಲಿ ಹಿಂದೆಂದೂ ಕೇಳರಿಯದ ನೆರೆ ಬಂದು ಸುತ್ತುಮುತ್ತಲಿನ ಅನೇಕ ಮನೆಗಳು ಕುಸಿದು ನೆರೆ ಪಾಲಾದವು. ಅಕ್ಕಪಕ್ಕದ ಕೃಷಿ ಭೂಮಿಗಳು ಹೂಳು ತುಂಬಿ ಕೃಷಿ ಅಯೋಗ್ಯವಾಗಿ ರೂಪುಗೊಂಡವು. 1941 ರಲ್ಲಿ ಏತಡ್ಕ ಸುಬ್ರಾಯ ಭಟ್ ಅವರು ಅಪರೂಪವಾಗಿದ್ದ ದೇವಸ್ಥಾನವಿದ್ದ ಜಾಗವನ್ನು ಖರೀಸಿದ್ದರು. 1948 ರಲ್ಲಿ ಜೀರ್ಣೋದ್ಧಾರ, ಬ್ರಹ್ಮಕಲಶ ನೆರವೇರಿಸಿದರು. ಧನ-ಧಾನ್ಯ ಎರಡೂ ದುರ್ಲಭ ಎನ್ನುವ ಪರಿಸ್ಥಿತಿ. ಇಡೀ ಊರವರ ಹಸಿವಿನ ದಿನಗಳಲ್ಲಿ ಕೈ ಹಿಡಿದು ಅನ್ನ ಕೋಶವನ್ನು ತುಂಬಿದ್ದು "ಹಲಸಿನ ಕಾಯಿ ಮತ್ತು ಹಣ್ಣು'. ದಿನದ ಮೂರೂ ಹೊತ್ತು ಹಲಸಿನ ಹಲವು ಬಗೆ, ಅನ್ನ, ತರಕಾರಿ, ಹಣ್ಣು ಹಂಪಲು ಎಲ್ಲವೂ ಒಂದರಲ್ಲಿ ಎಂದರೆ ಹಲಸಿನ ಕಾಯಿಯೇ. ದಿ. ಏತಡ್ಕ ಸುಬ್ರಾಯ ಭಟ್ ಅವರು ಈ ಮರಕ್ಕೆ ಊರವರು ಚಿರಋಣಿಯಾಗಿರಬೇಕು ಎನ್ನುವ ಪರಿಕಲ್ಪನೆಯಿಂದ "ಹಲಸಿನ ಹಣ್ಣಿನ ಅಪ್ಪ ಸೇವೆ'ಯನ್ನು ಆಚರಣೆಗೆ ತಂದರು. ಆ ಬಳಿಕ ಪ್ರತೀ ವರ್ಷವೂ ತಪ್ಪದೆ ಹಲಸಿನ ಹಣ್ಣಿನ ಅಪ್ಪ ಸೇವೆ ನಡೆಯುತ್ತಿದೆ.
ಅಭಿಮತ:
-ಹಲಸಿನ ಹಣ್ಣಿನ ಅಪ್ಪ ಸೇವೆಗೆ ಬಹುಶಃ ಈಗ ಎಪ್ಪತ್ತೈದು ವರ್ಷಗಳಾಗಿರಬಹುದು. ಆಹಾರದ ಅಭಾವ ಸಂದರ್ಭದಲ್ಲಿ ಹಸಿವು ನೀಗಿಸಿದ ಹಲಸಿನ ಕಾಯಿಯನ್ನು ಇಲ್ಲಿನ ಭಕ್ತರು ಮರೆತಿಲ್ಲ. ದೇವರಿಗೆ ಒಪ್ಪಿಸುವ ಪರಿಪಾಠ ಆರಂಭವಾಯಿತು. ನಾವೀಗ ಅದನ್ನು ಮೊಕ್ತೇಸರರಾಗಿ ಮುಂದುವರಿಸುತ್ತಿದ್ದೇವೆ. ಹಲಸಿನಲ್ಲಿ ಹಲವು ಸಂದೇಶಗಳಿವೆ. ಹಾಗಾಗೀ ನಾವು ವಿಸ್ತಾರವಾಗಿರುವ ದೇವಸ್ಥಾನದ ಭಕ್ತರು ಮತ್ತು ಹಲಸಿನ ಆಸಕ್ತರಿಗೆ ತಲುಪಲು ಪ್ರಯತ್ನ ಮಾಡುತ್ತಿದ್ದೇವೆ. ಈ ಸೇವೆಗೆ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ.
-ಚಂದ್ರಶೇಖರ ಏತಡ್ಕ
ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ.







