ಕಾಸರಗೋಡು: ಕೇಂದ್ರದ ಅಮೃತ್‍ಭಾರತ್ ಯೋಜನೆಯನ್ವಯ ಕಾಸರಗೋಡು ರೈಲ್ವೆ ನಿಲ್ದಾಣ ಅಭಿವೃದ್ಧಿಗೊಳ್ಳುತ್ತಿದ್ದು, ವಿವಿಧ ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸುವ ಕೇಂದ್ರದ ಕನಸು ಸಾಕಾರದತ್ತ ಸಾಗುತ್ತಿದೆ. ಕಾಸರಗೋಡು ರೈಲ್ವೆ ನಿಲ್ದಾಣದ ಎರುರುಭಾಗದ ಕಟ್ಟಡ ಅಭಿವೃಧಿಗೊಳಿಸುವುದರ ಜತೆಗೆ ಸೌಂದರ್ಯ ವೃದ್ಧಿಕಾಮಗಾರಿ, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಮೇಲ್ಚಾವಣಿ ವಿಸ್ತರಣೆ, ರೈಲ್ವೆ ನಿಲ್ದಾಣದ ಎದುರಿಗಿರುವ ಬಸ್ ಪ್ರಯಾಣಿಕರ ತಂಗುದಾಣದ ಕಟ್ಟಡ ನಿರ್ಮಾಣ ಸೇರಿದಂತೆ ಹಲವಾರು ಕೆಲಸಕಾರ್ಯಗಳು ಪ್ರಗತಿಯಲ್ಲಿದೆ. ಈ ಹಿಂದೆ ರೈಲ್ವೆ ನಿಲ್ದಾಣದ ಎದುರುಭಾಗದಲ್ಲಿ ಒಂದಷ್ಟು ಜಾಗ ಮಾತ್ರ ವಾಹನ ಪಾರ್ಕಿಂಗ್‍ಗೆ ಸೀಮಿತವಾಗಿದ್ದರೆ, ಉಳಿದ ವಾಹನಗಳನ್ನು ರಸ್ತೆಬದಿ ಎಲ್ಲೆಂದರಲ್ಲಿ ನಿಲ್ಲಿಸಬೇಕಾದ ಅನಿವಾರ್ಯತೆಯಿತ್ತು. ಪ್ರಸಕ್ತ ಒಂದನೇ ಟ್ರ್ಯಾಕ್ ಎದುರುಗಡೆಯಿರುವ ವಿಶಾಲ ಜಾಗದಲ್ಲಿ ವಾಹನಗಳ ಪಾರ್ಕಿಂಗ್‍ಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.
ಶೀತಲೀಕೃತ ವಿಶ್ರಾಂತಿಗೃಹ:
ಪ್ರಯಾಣಿಕರಿಗೆ ಹೆಚ್ಚು ಸೌಕರ್ಯಪ್ರದವಾದ ರೀತಿಯಲ್ಲಿ ನಿರ್ಮಿಸಿರುವ ವಿಶ್ರಾಂತಿಗೃಹ ಗಮನಸೆಳೆಯುತ್ತಿದೆ. ಭೇಸಿಗೆಯಲ್ಲಿ ಏರುತ್ತಿರುವ ತಾಪಮಾನದಿಂದ ಬೆವರಿ ಬಳಲುವ ಪ್ರಯಾಣಿಕರಿಗೆ ಇನ್ನು ಮುಂದೆ ತಂಪಾದ ಕೊಠಡಿಯಲ್ಲಿ ಕಾಲ ಕಳೆಯಬಹುದಾಗಿದೆ. ಕಾಸರಗೋಡು ರೈಲ್ವೆ ನಿಲ್ದಾಣದ ಒಂದನೇ ಫ್ಲ್ಯಾಟ್‍ಫಾರ್ಮ್‍ನ ಹೊರಾಂಗಣದಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಟಿಕೆಟ್ ಕೌಂಟರನ್ನು ಪ್ರಯಾಣಿಕರಿಗೆ ವಿಶ್ರಾಂತಿಗಾಗಿ ಎ.ಸಿ ಎಕ್ಸಿಕ್ಯೂಟಿವ್ ಲಾಂಜ್ ಆಗಿ ನವೀಕರಿಸಲಾಗಿದೆ. ರೈಲ್ವೆ ನಿಲ್ದಾಣಕ್ಕೆ ಮುಂಚಿತವಾಗಿ ತಲುಪುವವರು ಅಥವಾ ರೈಲು ವಿಳಂಬವಾಗಿ ಆಗಮಿಸುತ್ತಿದ್ದಲ್ಲಿ ವಿಶ್ರಾಂತಿ ಕೊಠಡಿಯನ್ನು ಬಳಸಿಕೊಳ್ಳಬಹುದಾಗಿದೆ. ಒಬ್ಬ ಪ್ರಯಾಣಿಕಗೆ 30ರೂ. ಶುಲ್ಕ ವಿಧಿಸಲಾಗುತ್ತಿದ್ದು, ಇದರೊಳಗೆ ಸುಸಜ್ಜಿತ ಆಸನ, ಉಚಿತ ವೈಫೈ, ಲ್ಯಾಪ್‍ಟಾಪ್, ಮೊಬೈಲ್ ಚಾರ್ಜರ್ ಕೂಡಾ ಲಭ್ಯವಿದೆ. ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಲಾಂಜ್‍ನಲ್ಲಿ ಆದ್ಯತೆ ಕಲ್ಪಿಸಲಾಗುತ್ತಿದ್ದು, ಇತರರಿಗೂ ಬಳಸಿಕೊಳ್ಳಬಹುದಾಗಿದೆ. ಇನ್ನು ಸ್ವಚ್ಛತೆಗೆ ಆದ್ಯತೆ ಕಲ್ಪಿಸಿ ಉಪಾಹಾರಗೃಹವನ್ನೂ ಲಾಂಜ್‍ನೊಳಗೆ ತೆರೆಯಲಾಗಿದೆ. ಸ್ಟೇಶನ್ ಮಾಸ್ಟರ್ ಕೊಠಡಿ ಸನಿಹ ಸುಸಜ್ಜಿತ ವಿಐಪಿ ಕೊಠಡಿಯನ್ನೂ ನಿರ್ಮಿಸಲಾಗಿದ್ದು, ಇದರೊಂದಿಗೆ ಕ್ಲಾಕ್ ರೂಮ್ ಕೂಡಾ ಕಾರ್ಯಪ್ರವೃತ್ತವಾಗಿದೆ.
ಇನ್ನು ರೈಲಲ್ಲಿ ಆಗಮಿಸುವ ಪ್ರಯಾಣಿಕರಿಗಾಗಿ ಕಾರ್ಯಾಚರಿಸುತ್ತಿರುವ ಪ್ರೀಪೈಡ್ ಆಟೋ ಕೇಂದ್ರದಲ್ಲಿ ಪ್ರಯಾಣಿಕರು ಮಳೆ, ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ಅನಿವಾರ್ಯತೆಯಿದೆ. ಪ್ರೀಪೈಡ್ ಆಟೋ ಸೇವೆಯನ್ನು ದಿನದ 24ತಾಸುಕಾಲ ಜಾರಿಯಲ್ಲಿರಿಸುವಂತೆಯೂ ಆಗ್ರಹ ಕೇಳಿಬರುತ್ತಿದೆ. ಶೌಚಗೃಹಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗಿದೆ. ಇನ್ನು ಕರಂದಕ್ಕಾಡಿನಿಂದ ರೈಲ್ವೆ ನಿಲ್ದಾಣಕ್ಕೆ ಬರುವ ರಸ್ತೆ ಶೋಚನೀಯಾವಸ್ಥೆಯಲ್ಲಿದೆ. ಬ್ಯಾಂಕ್ ರಸ್ತೆಯಲ್ಲಿ ರಸ್ತೆ ಶಿಥಿಲಾವಸ್ಥೆಯಲ್ಲಿದ್ದು, ತುರ್ತಾಗಿ ರೈಲ್ವೆ ನಿಲ್ದಾಣ ತಲುಪಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ಕರಂದಕ್ಕಾಡಿನಿಂದ ರೈಲ್ವೆ ನಿಲ್ದಾಣ ವರೆಗಿನ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಿ, ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸುವಂತೆ ಆಗ್ರಹ ಹೆಚ್ಚಾಗಿದೆ.







