ನವದೆಹಲಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ರೂಪಿಸಿದ ಪಿತೂರಿಗಳ ಕುರಿತು ಕೈಗೊಂಡಿರುವ ತನಿಖೆ ಭಾಗವಾಗಿ, ಜಮ್ಮು-ಕಾಶ್ಮೀರದ 32 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಲ್ವಾಮಾ, ಕುಲ್ಗಾಂ, ಶೋಪಿಯಾನ್, ಬಾರಾಮುಲ್ಲಾ ಹಾಗೂ ಕುಪ್ವಾಡ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ದಿ ರೆಜಿಸ್ಟನ್ ಫ್ರಂಟ್(ಟಿಆರ್‌ಎಫ್), ಯುಎಲ್‌ಎಫ್‌ಜೆ ಅಯಂಡ್ ಕೆ, ಮುಜಾಹಿದೀನ್ ಗಜ್ವಾ-ಉಲ್-ಹಿಂದ್, ಜಮ್ಮು ಮತ್ತು ಕಾಶ್ಮೀರ ಫ್ರೀಡಂ ಫೈಟರ್ಸ್(ಜೆಕೆಎಫ್‌ಎಫ್), ಕಾಶ್ಮೀರ ಟೈಗರ್ಸ್, ಪೀಪಲ್ಸ್ ಆಯಂಟಿ-ಫ್ಯಾಸಿಸ್ಟ್ ಫ್ರಂಟ್‌ಗೆ ಸೇರಿದ ಸ್ಥಳಗಳ ಮೇಲೆ ಎನ್‌ಐಎ ದಾಳಿ ನಡೆಸಿದೆ.
ಉಗ್ರರು ಹಾಗೂ ಅವರಿಗೆ ನೆರವು ನೀಡುವ ಸ್ಥಳೀಯರ ಮನೆಗಳು ಹಾಗೂ ಅವರಿಗೆ ಸೇರಿದ ಸ್ಥಳಗಳ ಮೇಲೆ ಈ ದಾಳಿ ನಡೆದಿದೆ. ಈ ಸಂಘಟನೆಗಳು ಲಷ್ಕರ್-ಎ-ತಯಬಾ(ಎಲ್‌ಇಟಿ), ಜೈಷ್-ಎ-ಮೊಹಮ್ಮದ್(ಜೆಇಎಂ), ಅಲ್-ಬದ್ರ್‌ನ ಅಂಗಸಂಸ್ಥೆಗಳಾಗಿವೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನ ಬೆಂಬಲವಿರುವ ನಿಷೇಧಿತ ಉಗ್ರ ಸಂಘಟನೆಗಳು ದೇಶದಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿರುವ ಕುರಿತ ಆರೋಪಕ್ಕೆ ಸಂಬಂಧಿಸಿದ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.




