HEALTH TIPS

ಬೆಂಗಳೂರು-ಮಂಗಳೂರು ಹೈಸ್ಪೀಡ್ ಕಾರಿಡಾರ್: 4ರಿಂದ 8 ಪಥಗಳು.. ಶೀಘ್ರದಲ್ಲೇ ಡಿಪಿಆರ್ ತಯಾರಿ ಕೆಲಸ ಶುರು

ಮಂಗಳೂರು: ಬೆಂಗಳೂರು ನಡುವೆ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಯಾಣಿಸುವ ಬಹುನಿರೀಕ್ಷಿತ ಹೈಸ್ಪೀಡ್‌ ಎಕ್ಸ್‌ಪ್ರೆಸ್‌ ಕಾರಿಡಾರ್‌ ಯೋಜನೆ ಕಾರ್ಯಗತವಾಗುವ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಹೆದ್ದಾರಿ ಸಚಿವಾಲಯದಿಂದ ಟೆಂಡರ್‌ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿ(ಡಿಪಿಆರ್‌) ತಯಾರಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ಸಂಸದ ಬ್ರಿಜೇಶ್‌ ಚೌಟ ಮಾಹಿತಿಯನ್ನು ತಿಳಿಸಿದ್ದಾರೆ.

ಮಂಗಳೂರು-ಬೆಂಗಳೂರು ಹೈಸ್ಪೀಡ್‌ ಕಾರಿಡಾರ್‌ ಯೋಜನೆಯ ಕುರಿತು ಮಾತನಾಡಿರುವ ಬ್ರಿಜೇಶ್‌ ಚೌಟ, ಮಂಗಳೂರು-ಬೆಂಗಳೂರು ನಡುವೆ ಅತ್ಯಂತ ವೇಗದ ಕಾರಿಡಾರ್ ರಸ್ತೆ ನಿರ್ಮಾಣದ ಕುರಿತಂತೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ ಪತ್ರ ಬಂದಿದ್ದು, ಈ ಯೋಜನೆಯ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಕ್ಕೆ ಕಳೆದ ಏ.30ರಂದು ಗುತ್ತಿಗೆ ನೀಡಲಾಗಿದ್ದು, ಈ DPR ಸಿದ್ಧಪಡಿಸಲು ಸರಿಸುಮಾರು 18 ತಿಂಗಳು ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಈ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಮಹತ್ವದ ಹೆಜ್ಜೆಯಿರಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ, ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹಾಗೂ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಹೈಸ್ಪೀಡ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯು ನಾಲ್ಕರಿಂದ ಎಂಟು ಪಥಗಳನ್ನು ಹೊಂದುವ ನಿರೀಕ್ಷೆ ಇದೆ. ಹಾಸನದ ಮೂಲಕ ಹಾದು ಹೋಗಲಿದೆ. ಈ ಹೆದ್ದಾರಿ ಪಥ ನಿರ್ಮಾಣವಾದರೆ ಎರಡು ಮಹಾನಗರಗಳ ನಡುವಿನ ಸಾರಿಗೆ ಮೂಲಸೌಕರ್ಯ ಮತ್ತಷ್ಟು ಮೇಲ್ದರ್ಜೆಗೇರಲಿದೆ. ಸುಧಾರಿತ ಮಾರ್ಗದಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಜೊತೆಗೆ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣದ ಸಮಯ ಬಹಳ ಕಡಿಮೆ ಮಾಡುತ್ತದೆ ಮತ್ತು ಕರ್ನಾಟಕದ ಪ್ರಮುಖ ನಗರಗಳ ನಡುವೆ ಸುರಕ್ಷಿತ, ಹೆಚ್ಚು ಪರಿಣಾಮಕಾರಿ ಹಾಗೂ ಮಳೆಗಾಲ ಸೇರಿದಂತೆ ಸರ್ವ ಋತುವಿಗೂ ಅಬಾಧಿತವಾಗಿರುವ ಸಂಪರ್ಕ ವ್ಯವಸ್ಥೆಯನ್ನು ಒದಗಿಸುತ್ತದೆ.

ಈ ಯೋಜನೆಯಿಂದ ಮಂಗಳೂರು ಮಾತ್ರವಲ್ಲದೇ ದಕ್ಷಿಣ ಕರ್ನಾಟಕಕ್ಕೆ ಹಾಗೂ ಸುತ್ತಮುತ್ತದ ನಗರಗಳ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಮಂಗಳೂರು ಬಂದರು ಹಾಗೂ ಪ್ರವಾಸೋದ್ಯಮ, ವ್ಯಾಪಾರ - ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಗೂ ಇನ್ನಷ್ಟು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು-ಮಂಗಳೂರು ಹೈ ಸ್ಪೀಡ್ ಕಾರಿಡಾರ್ ಯೋಜನೆ ಜಾರಿ ಸಂಬಂಧ ಕಳೆದೊಂದು ವರ್ಷದಿಂದ ಬ್ರಿಜೇಶ್‌ ಚೌಟ ಅವರು ನಿರಂತರವಾಗಿ ಶ್ರಮ ವಹಿಸುತ್ತಿದ್ದು, ಹಲವು ಬಾರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಹಿತ ಹಲವು ಅಧಿಕಾರಿಗಳು, ಸಚಿವರನ್ನು ಭೇಟಿ ಮಾಡಿದ್ದರು. ಆ ಮೂಲಕ ಈ ಯೋಜನೆ ಕಾರ್ಯಗತಗೊಳಿಸುವುದಕ್ಕೆ ಎಲ್ಲ ರೀತಿಯ ಪ್ರಯನ್ನಗಳನ್ನು ಅವರು ಗಮನಿಸಿದ್ದಾರೆ.

ಒಟ್ಟಾರೆ ಕರ್ನಾಟಕದ ಈ ಪ್ರಮುಖ ಎಕ್ಸ್‌ಪ್ರೆಸ್‌ವೇ ವಾಸ್ತವವಾದರೆ, ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣದ ಸಮಯವು ಪ್ರಸ್ತುತ ಇರುವ 7-8 ಗಂಟೆಗಳಿಂದ ಕಡಿಮೆಯಾಗುವ ನಿರೀಕ್ಷೆಯಿದೆ. ಅಲ್ಲದೆ, ಈ ಯೋಜನೆಯ ಎಲ್ಲ ಹಂತದ ಪ್ರಕ್ರಿಯೆಗಳು ನಿರೀಕ್ಷೆಯಂತೆ ಪೂರ್ಣಗೊಂಡರೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿಯು ಶೀಘ್ರ ಪ್ರಾರಂಭವಾಗುವ ಸಾಧ್ಯತೆಯಿದೆ.

ಶಿರಾಡಿ ಘಾಟಿಯಲ್ಲಿ ಪ್ರತ್ಯೇಕ ರೈಲು ಮಾರ್ಗ

ಶಿರಾಡಿ ಘಾಟಿಯಲ್ಲಿ ಪ್ರತ್ಯೇಕ ರೈಲು ಮಾರ್ಗ ನಿರ್ಮಿಸಲು ರೈಲ್ವೇ ಇಲಾಖೆ ಕೂಡಾ ಡಿಪಿಆರ್ ಸಿದ್ದಪಡಿಸಲು ಮುಂದಾಗಿದೆ. ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವ ಶಿರಾಡಿ ಘಾಟ್‌ ಸೂಕ್ಷ್ಮ ಪರಿಸರ ವಲಯದಲ್ಲಿರುವುದರಿಂದ ಇಲ್ಲಿ ರಸ್ತೆ ಮತ್ತು ರೈಲು ಮಾರ್ಗವನ್ನು ಸಮಾನಾಂತರವಾಗಿ ಅಭಿವೃದ್ದಿಸುವ ಸಾಧ್ಯತೆಗಳ ಬಗ್ಗೆ ಅನ್ವೇಷಿಸಲು ರೈಲ್ವೆ ಮಂಡಳಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ದ ಜಂಟಿ ಸಮಿತಿಯೊಂದನ್ನು ರಚಿಸುವಂತೆ ಮನವಿ ಮಾಡಲಾಗಿದೆ. ಸಂಯೋಜಿತ ಯೋಜನೆ ರೂಪಿಸುವುದರಿಂದ ಅರಣ್ಯ ಮತ್ತು ಪರಿಸರ ಇಲಾಖೆಗಳ ಅನುಮೋದನೆ ಪಡೆಯುವುದು ಸುಲಭವಾಗಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries