ಸಂಭಲ್: ವಿದ್ಯುತ್ ಕಳ್ಳತನದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಸಂಭಲ್ ಕ್ಷೇತ್ರದ ಲೋಕಸಭಾ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಅಲಹಾಬಾದ್ ಹೈಕೋರ್ಟ್‌ನ ಆದೇಶದಂತೆ ಇಂಧನ ಇಲಾಖೆಗೆ ₹6 ಲಕ್ಷ ಠೇವಣಿ ಇಟ್ಟಿದ್ದಾರೆ.
2023ರ ಡಿಸೆಂಬರ್17ರಂದು ಸಂಸದರ ಮನೆಗೆ ಇಲಾಖೆ ಸ್ಮಾರ್ಟ್ ಮೀಟರ್ ಅಳವಡಿಸಿತ್ತು.
ಡಿ.19ರಂದು ವಿದ್ಯುತ್ ಲೋಡ್ ಕುರಿತು ಪರಿಶೀಲನೆ ನಡೆಸಿತ್ತು. ಈ ವೇಳೆ ವಿದ್ಯುತ್ ಕಳ್ಳತನವಾಗಿರುವುದು ಪತ್ತೆಯಾದ ಹಿನ್ನೆಲೆ ₹1.91 ಕೋಟಿ ದಂಡ ಪಾವತಿಸುವಂತೆ ಕೇಳಿತ್ತು. ಹಲವು ಬಾರಿ ಅವಕಾಶ ನೀಡಿದರೂ ಸಂಸದನ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಇಲಾಖೆ ಬಳಿಕ ಕೋರ್ಟ್ ಮೆಟ್ಟಿಲೇರಿತ್ತು.
ನ್ಯಾಯಾಲಯದಲ್ಲಿ ಜೂನ್ 3ರಂದು ಸಂಸದ ರೆಹಮಾನ್ ವಿಚಾರಣೆ ಎದುರಿಸಿದ್ದರು. ಈ ವೇಳೆ ನ್ಯಾಯಾಲಯ ಇಲಾಖೆಯಲ್ಲಿ ₹6 ಲಕ್ಷ ಠೇವಣಿ ಇಡುವಂತೆ ನಿರ್ದೇಶಿಸಿತ್ತು. ಅದರಂತೆ ಸಂಸದರ ಸಲಹೆಗಾರ ಫರಿದ್ ಅಹಮದ್ ಸ್ಥಳೀಯ ವಿದ್ಯುತ್ ಕಚೇರಿಗೆ ತೆರಳಿ ₹6 ಲಕ್ಷ ದಂಡ ಪಾವತಿಸಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಸಂಸದರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದ ಕುರಿತ ಮುಂದಿನ ವಿಚಾರಣೆಯನ್ನು ಜುಲೈ 2ಕ್ಕೆ ನಿಗದಿಪಡಿಸಲಾಗಿದೆ.




