ಸೊಹ್ರಾ: ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಪತ್ನಿ ಸೋನಮ್ ಸೇರಿದಂತೆ ಇತರರನ್ನು ಮೇಘಾಲಯ ಪೊಲೀಸರು ಮಂಗಳವಾರ ಅಪರಾಧ ಕೃತ್ಯದ ಮರುಸೃಷ್ಟಿಗಾಗಿ ಇಲ್ಲಿಗೆ ಕರೆತಂದಿದ್ದರು.
ಪತ್ನಿ ಸೋನಮ್ ಜತೆ ಮಧುಚಂದ್ರಕ್ಕೆ ಬಂದಿದ್ದಾಗ ಮೇ 23ರಂದು ರಾಜಾ ರಘುವಂಶಿ ಅವರ ಭೀಕರ ಹತ್ಯೆ ನಡೆದಿತ್ತು.
ಆನಂತರ ಪತ್ನಿ ಮತ್ತು ಆಕೆಯ ಪ್ರಿಯಕರನೆಂದು ಶಂಕಿಸಲಾದ ರಾಜ್ ಮತ್ತು ಮೂವರು ಹಲ್ಲೆಕೋರರನ್ನು ಪೊಲೀಸರು ಬಂಧಿಸಿದ್ದರು. ಪ್ರವಾಸಿಗರು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟ ದೃಶ್ಯದಲ್ಲಿ ಸೋನಮ್ ಮತ್ತು ರಾಜ್ ಕಾಣಿಸಿಕೊಂಡಿದ್ದರು.
ಜೂನ್ 2ರಂದು ರಘುವಂಶಿ ಅವರ ಕೊಳೆತ ಶವ ದೊರೆತಿದ್ದ ವೇಯಿ ವಾವಡೋಂಗ್ ಜಲಪಾತ ಸಮೀಪದ ಕಂದಕದ ಮೇಲಿನ ಪಾರ್ಕಿಂಗ್ ಸ್ಥಳಕ್ಕೆ ಆರೋಪಿಗಳನ್ನು ಕರೆತಂದು, ಅವರು ನೀಡಿರುವ ಹೇಳಿಕೆ ಆಧಾರದ ಮೇಲೆ ಕೃತ್ಯದ ಕೊನೆಯ ಕ್ಷಣಗಳನ್ನು ಮರುಸೃಷ್ಟಿ ಮಾಡಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.




