ಹೌದು, ಭಾರತದ ಕರಾವಳಿ ತೀರ ಎಷ್ಟಿದೆ ಅಂದ್ರೇ, ನಮಗೆ ಶಾಲೆಯಲ್ಲಿ ಕಲಿಸಿದ್ದು, 7,516 ಕಿಲೋ ಮೀಟರ್ ಅಂತಾ.. ನಾವು ಕೂಡ ಅದನ್ನು ಈಗಲೂ ಹೇಳ್ತಿದೀವಿ.. ಎಲ್ಲ ಕಡೆನೂ ಬಳಸ್ತಿದೀವಿ.. ಆದರೆ, ಇದು 1970ರ ದಶಕದಲ್ಲಿನ ಮಾಹಿತಿ ಅವತ್ತು ಅಳೆದಾಗ ದೇಶದ ಕರಾವಳಿ 7,516 ಕಿಮೀ ಇತ್ತು. ಆದರೆ, ಇತ್ತೀಚೆಗೆ ನಡೆಸಿದ ಅತ್ಯಾಧುನಿಕ ಮಾಪನದ ಪ್ರಕಾರ, ನಮ್ಮ ಕರಾವಳಿ ತೀರದ ಉದ್ದ ಈಗ 11,098 ಕಿಲೋ ಮೀಟರ್ ಆಗಿದೆ. ಅಂದರೆ, ಬರೋಬ್ಬರಿ 3,582 ಕಿಲೋ ಮೀಟರ್‌ಗಳಷ್ಟು ಕರಾವಳಿ ಹೆಚ್ಚಾಗಿದೆ. ಮೊದಲಿಗಿಂತ ಸುಮಾರು ಶೇ.48ರಷ್ಟು ಜಾಸ್ತಿಯಾಗಿದೆ. ಈ ಹಿಂದೆ ಕರ್ನಾಟಕದ ಕರಾವಳಿ 320 ಕಿಲೋ ಮೀಟರ್ ಇತ್ತು. ಈಗ ಅದು 343 ಕಿಲೋ ಮೀಟರ್‌ಗೆ ಏರಿಕೆಯಾಗಿದೆ. ಅದೇ ರೀತಿ ಬಹುತೇಕ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಕರಾವಳಿಯ ಉದ್ದ ಹೆಚ್ಚಳವಾಗಿದೆ.
ಭಾರತದ ಕರಾವಳಿ ಉದ್ದ ಹೆಚ್ಚಾಗಲು ಕಾರಣ ಏನು?
- ಭಾರತದ ಕರಾವಳಿ ಉದ್ದ ಹೆಚ್ಚಾಗಿ, ಈ ದೊಡ್ಡ ವ್ಯತ್ಯಾಸಕ್ಕೆ ಮುಖ್ಯ ಕಾರಣ ಏನೆಂದರೆ ಮಾಪನಕ್ಕೆ ಬಳಸಿದ ಡೇಟಾದ ಸ್ಕೇಲ್ ಅಥವಾ ನಿಖರತೆ.
- ಈ ಹಿಂದೆ 1 ಅನುಪಾತ 45,00,000 ಲಕ್ಷ.. ಅಂದ್ರೇ ಒಂದಕ್ಕೆ ನಲವತ್ತೈದು ಲಕ್ಷ ಸ್ಕೇಲ್‌ನ ಡೇಟಾವನ್ನು ಬಳಸಿ ಮಾಡಲಾಗಿತ್ತು. ಇದು ಕಡಿಮೆ ರೆಸಲ್ಯೂಷನ್ ಅನ್ನು ಹೊಂದಿತ್ತು.
- ಆದರೆ, ಕಾಲ ಬದಲಾದಂತೆ, ತಂತ್ರಜ್ಞಾನ ಮುಂದುವರೆದಂತೆ, ಅತ್ಯುತ್ತಮ ರೆಸಲ್ಯೂಶನ್ ಡೇಟಾ ಲಭ್ಯವಾಗಿದೆ. ಇತ್ತೀಚಿನ ಮಾಪನವನ್ನು 1 ಅನುಪಾತ 2,50,000 ಸ್ಕೇಲ್‌ನ ಡೇಟಾ ಬಳಸಿ ಮಾಡಲಾಗಿದೆ.
- ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳೋಣ.. ಕರಾವಳಿ ತೀರಗಳು ನೇರವಾಗಿ ರೇಖೆಗಳ ರೀತಿ ಇರಲ್ಲ. ಅವು ಅಸಂಖ್ಯಾತ ತಿರುವುಗಳಿಂದ, ಅಂಕುಡೊಂಕುಗಳಿಂದ ಕೂಡಿರುತ್ತವೆ.
- ನಾವು ಬಳಸುವ ಅಳತೆಗೋಲು ಅಥವಾ ಸ್ಕೇಲ್ ಚಿಕ್ಕದಾದಷ್ಟು, ಅಳತೆ ನಿಖರವಾಗುತ್ತದೆ ಮತ್ತು ಉದ್ದ ಹೆಚ್ಚಾಗುತ್ತದೆ. ಉದಾಹರಣೆಗೆ, ಒಂದು ಕಿಲೋ ಮೀಟರ್ ಉದ್ದದ ಅಳತೆಗೋಲು ಬಳಸಿ ಅಳೆದರೆ, ಅದು ನೂರಾರು ಮೀಟರ್‌ಗಳ ಸಣ್ಣಪುಟ್ಟ ತಿರುವುಗಳನ್ನು ಕಡೆಗಣಿಸಿ, ನೇರ ರೇಖೆಯಂತೆ ತೋರಿಸುತ್ತದೆ.
- ಆದರೆ, ಒಂದು ಮೀಟರ್ ಅಳತೆಗೋಲನ್ನು ಬಳಸಿದರೆ, ಆ ಎಲ್ಲಾ ಸಣ್ಣಪುಟ್ಟ ತಿರುವುಗಳೂ ಲೆಕ್ಕಕ್ಕೆ ಬರುತ್ತವೆ. ಆಗ ಉದ್ದ ಸಹಜವಾಗಿಯೇ ಹೆಚ್ಚಾಗುತ್ತದೆ. ಹಿಂದೆ, ಕಡಿಮೆ ರೆಸಲ್ಯೂಶನ್ ಡೇಟಾದಲ್ಲಿ ಈ ತಿರುವುಗಳೆಲ್ಲಾ ಮಸುಕಾಗಿ, ನೇರ ರೇಖೆಗಳಂತೆ ಕಾಣುತ್ತಿದ್ದವು. ಇದರಿಂದ ಉದ್ದ ಕಡಿಮೆಯಾಗಿತ್ತು. ಈಗಿನ ಹೈ-ರೆಸಲ್ಯೂಶನ್ ಡೇಟಾವು ಕರಾವಳಿಯ ಪ್ರತಿಯೊಂದು ಸಣ್ಣ ತಿರುವನ್ನು ಕೂಡ ದಾಖಲಿಸುತ್ತದೆ.
- ಅದಲ್ಲದೆ, ಹಿಂದಿನ ಲೆಕ್ಕಾಚಾರಗಳು ಸಾಂಪ್ರದಾಯಿಕ ಮತ್ತು ಮಾನವಚಾಲಿತವಾಗಿದ್ದವು. ಈಗ, ಆಧುನಿಕ GIS ಅಂದ್ರೇ ಜಿಯೋಗ್ರಾಫಿಕ್ ಇನ್ಫರ್ಮೇಷನ್ ಸಿಸ್ಟಮ್ ಸಾಫ್ಟವೇರ್ ಬಳಸಿ ಈ ಪ್ರಕ್ರಿಯೆಯನ್ನು ನಡೆಸಲಾಗಿದೆ. ಇದು ಭೂಮಿಯ ಅನಿಯಮಿತ ರಚನೆಗಳನ್ನು ಹೆಚ್ಚು ಹೆಚ್ಚು ನಿಖರವಾಗಿ ಸೆರೆಹಿಡಿಯುಯತ್ತದೆ.
- ಇದರ ಜೊತೆ ಉದ್ದ ಹೆಚ್ಚಾಗಲು ಮತ್ತೊಂದು ಪ್ರಮುಖ ಕಾರಣ ಏನೆಂದರೆ, 1970ರಲ್ಲಿ ಅಳತೆ ಮಾಡುವಾಗ ಹಲವು ಕಡಲಾಚೆಯ ದ್ವೀಪಗಳ ಕರಾವಳಿ ತೀರವನ್ನು ಸೇರಿಸಿದ್ದಿಲ್ಲ.
- ಹಿಂದಿನ ಕಡಿಮೆ ಸ್ಕೇಲ್ ಡೇಟಾದಲ್ಲಿ ಈ ದ್ವೀಪಗಳು ಕಾಣಿಸುತ್ತಿರಲಿಲ್ಲ ಅಥವಾ ಮಾನವಚಾಲಿತ ಮಾಪನದ ಮಿತಿಗಳಿಂದ ಅವುಗಳನ್ನು ಕೈಬಿಡಲಾಗಿತ್ತು. ಈಗ ಅವುಗಳನ್ನೆಲ್ಲಾ ಅಳತೆ ಮಾಡುವಾಗ ಸೇರಿಸಲಾಗಿದ್ದು, ಭಾರತದ ಕರಾವಳಿಯ ಉದ್ಧ ಸಹಜವಾಗಿಯೇ ಹೆಚ್ಚಾಗಿದೆ. ಅದಲ್ಲದೇ ಕರಾವಳಿಯ ಉದ್ದವನ್ನು 'ಹೈ-ವಾಟರ್ ಲೈನ್' ಆಧಾರದ ಮೇಲೆ ಅಳೆಯಲಾಗಿದೆ.

ಯಾವ ರಾಜ್ಯದ ಕರಾವಳಿ ಹೇಗಿದೆ?
| ಕ್ರ.ಸಂ. | ರಾಜ್ಯ/ಕೇಂದ್ರಾಡಳಿತ ಪ್ರದೇಶ | ಕರಾವಳಿಯ ಉದ್ದ (ಕಿ.ಮೀ. ಗಳಲ್ಲಿ) |
| 1. | ಗುಜರಾತ್ | 2,340.62 |
| 2. | ಮಹಾರಾಷ್ಟ್ರ | 877.97 |
| 3. | ಗೋವಾ | 193.95 |
| 4. | ಕರ್ನಾಟಕ | 343.30 |
| 5. | ಕೇರಳ | 600.15 |
| 6. | ತಮಿಳುನಾಡು | 1,068.69 |
| 7. | ಆಂಧ್ರಪ್ರದೇಶ | 1,053.07 |
| 8. | ಒಡಿಶಾ | 574.71 |
| 9. | ಪಶ್ಚಿಮ ಬಂಗಾಳ | 721.02 |
| 10. | ದಮನ್ ಮತ್ತು ದಿಯು | 54.38 |
| 11. | ಪಾಂಡಿಚೇರಿ | 42.65 |
| 12. | ಲಕ್ಷದ್ವೀಪ ದ್ವೀಪಗಳು | 144.80 |
| 13. | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 3,083.50 |
| ಒಟ್ಟು ಉದ್ದ | 11,098.81 |
ಇನ್ನು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಾವಳಿಯ ಉದ್ದ ನೋಡಿದರೆ. ಗುಜರಾತ್ 2,340.62 ಕಿ.ಮೀ., ಮಹಾರಾಷ್ಟ್ರ 877.97 ಕಿ.ಮೀ., ಗೋವಾ 193.95 ಕಿ.ಮೀ., ಕರ್ನಾಟಕ 343.30 ಕಿ.ಮೀ., ಕೇರಳ 600.15 ಕಿ.ಮೀ., ತಮಿಳುನಾಡು 1,068.69 ಕಿ.ಮೀ., ಆಂಧ್ರಪ್ರದೇಶ 1,053.07 ಕಿ.ಮೀ., ಒಡಿಶಾ 574.71 ಕಿ.ಮೀ., ಪಶ್ಚಿಮ ಬಂಗಾಳ 721.02 ಕಿ.ಮೀ., ದಮನ್ ಮತ್ತು ದಿಯು 54.38 ಕಿ.ಮೀ., ಪಾಂಡಿಚೇರಿ 42.65 ಕಿ.ಮೀ., ಲಕ್ಷದ್ವೀಪ ದ್ವೀಪಗಳು 144.80 ಕಿ.ಮೀ., ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 3,083.50 ಕಿ.ಮೀ. ಆಗಿದೆ. ರಾಜ್ಯದಲ್ಲಿ ಗುಜರಾತ್, ಕೇಂದ್ರಾಡಳಿತ ದ್ವೀಪದಲ್ಲಿ ಅಂಡಮಾನ್ ಮತ್ತು ನಿಕೋಬಾರ್‌ನ ಕರಾವಳಿಯ ಉದ್ದ ಹೆಚ್ಚಿದೆ. ಈ ಎಲ್ಲವನ್ನು ಸೇರಿ, ಭಾರತದ ಕರಾವಳಿಯ ಒಟ್ಟು ಉದ್ದ ಪ್ರಸ್ತುತ 11,098.81 ಕಿ.ಮೀ. ಆಗಿದೆ.
ಕರಾವಳಿಯ ನಿಜವಾದ ಉದ್ದ ಅಳೆಯಲು ಆಗಲ್ಲ!
ಭಾರತದಲ್ಲಿ ಎಷ್ಟು ಕಡಲಾಚೆ ದ್ವೀಪ ಇವೆ ಗೊತ್ತಾ?
ಇದು ಒಂದು ಕಡೆ ಆಯ್ತು.. ದೇಶಕ್ಕೆ ಹೊಂದಿಕೊಂಡಂತೆ ಕರಾವಳಿ ತೀರದಲ್ಲಿ ಅಳತೆ ಸಮಸ್ಯೆಯಿತ್ತು. ಆದರೆ, ದ್ವೀಪಗಳಲ್ಲಿ ಬೇರೆಯದ್ದೇ ರೀತಿಯ ಗೊಂದಲಗಳಿವೆ. ಉದಾಹರಣೆಗೆ, ಒಂದು ನಿರ್ದಿಷ್ಟ ಸ್ಥಳವು ಒಂದೊಂದು ಸಲ ದ್ವೀಪವಾಗಿರುತ್ತದೆ.. ಕೆಲವೊಂದು ಸಲ ಭೂಮಿಗೆ ಸೇರಿಕೊಂಡಿರುತ್ತದೆ. ಇದನ್ನು ಕರಾವಳಿಯೆಂದು ಗುರುತಿಸುವುದೇ ಕಷ್ಟ ದ ಕೆಲಸ. 2016ರಲ್ಲಿ, ಭಾರತದ ಸರ್ವೇಯರ್ ಜನರಲ್ ಕಚೇರಿ ನಡೆಸಿದ ಸಮೀಕ್ಷೆಯು ದೇಶದಲ್ಲಿ 1,382 ಕಡಲಾಚೆಯ ದ್ವೀಪಗಳಿವೆ ಎಂದು ಪಟ್ಟಿ ಮಾಡಿತ್ತು. ಆದರೆ, ರಾಜ್ಯ ಸರ್ಕಾರಗಳು, ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯಂತಹ ಇತರ ಸಂಸ್ಥೆಗಳು 1,334 ದ್ವೀಪಗಳಿವೆ ಎಂದು ಹೇಳಿತ್ತು. ಇದರಿಂದ ಗೊಂದಲ ಸೃಷ್ಟಿಯಾಗಿತ್ತು. ಅದನ್ನು ನಿವಾರಿಸಲು ಡೇಟಾವನ್ನು ಸಮನ್ವಯಗೊಳಿಸಲಾಯಿತು. ದ್ವೀಪಗಳ ವ್ಯಾಖ್ಯಾನಗಳನ್ನು ಸ್ಪಷ್ಟಪಡಿಸಿ, ವರ್ಗೀಕರಣವನ್ನು ಪ್ರಮಾಣೀಕರಿಸಿ, ದೇಶದಲ್ಲಿನ ಕಡಲಾಚೆಯ ದ್ವೀಪಗಳ ಹೊಸ ಸಂಖ್ಯೆಯನ್ನು 1,298 ಎಂದು ಅಂತಿಮಗೊಳಿಸಲಾಯಿತು. ಇದಲ್ಲದೆ, ಈ ಸಮೀಕ್ಷೆಯು 91 ಒಳನಾಡಿನ ದ್ವೀಪಗಳನ್ನು ಸಹ ಪಟ್ಟಿ ಮಾಡಿದೆ. ಹೀಗಾಗಿ, ಭಾರತದಲ್ಲಿನ ಒಟ್ಟು ದ್ವೀಪಗಳ ಸಂಖ್ಯೆ ಈಗ 1,389 ಆಗಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿರುವ ಅಸಂಖ್ಯಾತ ನದಿ ದ್ವೀಪಗಳನ್ನು ಈ ಲೆಕ್ಕಕ್ಕೆ ಸೇರಿಸಿಲ್ಲ.ಹೊಸ ಕರಾವಳಿ ಉದ್ದದಿಂದ ಏನೆಲ್ಲಾ ಆಗುತ್ತೆ?
ಇದೆಲ್ಲಾ ಆಯ್ತು… ಭೂಮಿ ಏನು ಜಾಸ್ತಿ ಬಂದಿಲ್ಲವಲ್ಲ.. ಈ ಹೊಸ ಸಂಖ್ಯೆಗಳಿಂದ ಏನು ಪ್ರಯೋಜನ ಎಂದು ನೀವು ಕೇಳಬಹುದು. ಇದು ಕೇವಲ ಪುಸ್ತಕದಲ್ಲಿ ಬದಲಾಗುವ ಅಂಕಿ-ಸಂಖ್ಯೆಯಲ್ಲ.. ಇದು ನಮ್ಮ ದೇಶದ ಭೂಪ್ರದೇಶ ಮತ್ತು ಭೂ ರಚನೆಯ ಬಗ್ಗೆ ನಮಗಿರುವ ತಿಳುವಳಿಕೆಯನ್ನು ಮತ್ತಷ್ಟು ಆಳವಾಗಿಸುತ್ತದೆ. ಅದರ ಜೊತೆ ಈ ಹೊಸ, ನಿಖರವಾದ ಸಂಖ್ಯೆಗಳು ಆಡಳಿತಾತ್ಮಕ, ಅಭಿವೃದ್ಧಿ ಮತ್ತು ಮುಖ್ಯವಾಗಿ ನಮ್ಮ ದೇಶದ ಭದ್ರತೆಯ ದೃಷ್ಟಿಯಿಂದ ಮಹತ್ವದ ಪಾತ್ರವನ್ನು ವಹಿಸುತ್ತವೆ. ಉದಾಹರಣೆಗೆ ಹೊಸ ಕರಾವಳಿ ತೀರದ ಅಳತೆಯು ಕರಾವಳಿ ವಲಯ ನಿಯಮಗಳ ವ್ಯಾಪ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಕರಾವಳಿ ಸವೆತವನ್ನು ತಡೆಯುವ ಮತ್ತು ಹವಾಮಾನ ಬದಲಾವಣೆಯ ಅಪಾಯಗಳಿಂದ ನಮ್ಮ ಕರಾವಳಿಯನ್ನು ರಕ್ಷಿಸುವ ಯೋಜನೆಗಳನ್ನು ಮತ್ತಷ್ಟು ಪರಿಣಾಮಕರಿಯಾಗಿ ರೂಪಿಸಲು ಇದು ಸಹಾಯ ಮಾಡುತ್ತದೆ. ಅದರ ಜೊತೆ ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೂ ಇದು ಹೊಸ ದಿಕ್ಕು ತೋರಿಸಲಿದೆ ಎನ್ನಲಾಗುತ್ತಿದೆ.ಒಟ್ಟಿನಲ್ಲಿ, ಈ ಹೊಸ ಸಂಖ್ಯೆಗಳು ಕೇವಲ ಅಂಕಿ-ಅಂಶಗಳಲ್ಲ. ಇದು ತಂತ್ರಜ್ಞಾನದ ಮೂಲಕ ನಮ್ಮನ್ನೇ ನಾವು ಚೆನ್ನಾಗಿ ಅರಿತುಕೊಳ್ಳುತ್ತಿರುವ ಪರಿ.. ಈ ಹೊಸ ಜ್ಞಾನ, ನಮ್ಮ ದೇಶವನ್ನು ಮತ್ತಷ್ಟು ಸದೃಢವಾಗಿ, ಸುರಕ್ಷಿತವಾಗಿ ಮತ್ತು ಸಮೃದ್ಧವಾಗಿ ರೂಪಿಸಲು ಒಂದು ಸ್ಪಷ್ಟ ಬುನಾದಿಯಾಗಿದೆ. ಇದು ಕೇವಲ ಬದಲಾದ ಸಂಖ್ಯೆಯಲ್ಲ, ಬದಲಾಗುತ್ತಿರುವ ಭಾರತದ ಶಕ್ತಿಯ ಸಂಕೇತ. ಈಗ ಭಾರತದ ಕರಾವಳಿ 7,516 ಕಿಲೋ ಮೀಟರ್ ಅಲ್ಲ.. 11,098 ಕಿಲೋ ಮೀಟರ್ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಿ..




