HEALTH TIPS

ಇಸ್ರೇಲ್ ದಾಳಿಯಲ್ಲಿ 78 ಮಂದಿ ಸಾವು, 320ಕ್ಕೂ ಹೆಚ್ಚು ಜನರಿಗೆ ಗಾಯ: ಇರಾನ್

ಟೆಹರಾನ್: ಇರಾನ್‌ನ ಪರಮಾಣು ಘಟಕಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್‌ ಸೇನೆ ಶುಕ್ರವಾರ ಬೆಳಗಿನ ಜಾವ ಭಾರಿ ವೈಮಾನಿಕ ದಾಳಿ ನಡೆಸಿದ್ದು, 78 ಜನ ಮೃತಪಟ್ಟಿದ್ದಾರೆ. 320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಇರಾನ್ ರಾಯಭಾರಿ ಶುಕ್ರವಾರ ಮಾಹಿತಿ ನೀಡಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಮಾತನಾಡಿದ ಇರಾನ್‌ ರಾಯಭಾರಿ ಅಮೀರ್ ಸಯೀದ್ ಇರಾವನಿ, ಇಸ್ರೇಲ್‌ ಹಿರಿಯ ಮಿಲಿಟರಿ ಅಧಿಕಾರಿಗಳು ಮತ್ತು ಪರಮಾಣು ವಿಜ್ಞಾನಿಗಳನ್ನು ಗುರಿಯಾಗಿಸಿ ಪಾತಕಿಕೃತ್ಯ ಮತ್ತು ಕ್ರೂರ ದಾಳಿ ನಡೆಸಿದೆ. ಆದರೆ ದಾಳಿಗೆ ಬಲಿಯಾದವರಲ್ಲಿ ಬಹುಪಾಲು ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಹೇಳಿದ್ದಾರೆ.

ಇರಾನ್‌ನ ಹಲವು ನಗರಗಳಲ್ಲಿ ನಾಗರಿಕ ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಆಕ್ರಮಣಕಾರಿ ಕೃತ್ಯ ನಡೆಸುತ್ತಿದೆ ಎಂದೂ ಅವರು ಹೇಳಿದ್ದಾರೆ.

'ಆಪ‍ರೇಷನ್‌ ರೈಸಿಂಗ್‌ ಲಯನ್' ಹೆಸರಿನಡಿ ನಡೆದ ಕಾರ್ಯಾಚರಣೆಯಲ್ಲಿ ಇರಾನ್‌ ಸೇನೆಯ ಅತ್ಯುನ್ನತ ಶ್ರೇಣಿಯ ಅಧಿಕಾರಿ, ಸಶಸ್ತ್ರ ಪಡೆಗಳ ಮುಖ್ಯಸ್ಥ ಮೊಹಮ್ಮದ್‌ ಬಘೇರಿ ಮತ್ತು ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ) ಮುಖ್ಯಸ್ಥ ಹುಸೇನ್‌ ಸಲಾಮಿ ಮೃತಪಟ್ಟಿದ್ದಾರೆ.

ಐಆರ್‌ಜಿಸಿಯ ಗುರಿ ನಿರ್ದೇಶಿತ ಕ್ಷಿಪಣಿ ಯೋಜನೆಯ ಮುಖ್ಯಸ್ಥ ಅಮೀರ್‌ ಅಲಿ ಹಾಜಿಝದಾ ಅವರೂ ಬಲಿಯಾಗಿದ್ದಾರೆ. ಈ ಮೂವರ ಸಾವನ್ನು ಇರಾನ್‌ ದೃಢಪಡಿಸಿದೆ. ಇರಾನ್‌ ಪರಮಾಣು ಯೋಜನೆಯಲ್ಲಿ ಭಾಗಿಯಾಗಿರುವ ಹಲವು ವಿಜ್ಞಾನಿಗಳೂ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಇಸ್ರೇಲ್‌ನ ಇಂಟೆಲಿಜೆನ್ಸ್‌ ಏಜೆನ್ಸಿ ಮೊಸಾದ್‌, ಶುಕ್ರವಾರದ ದಾಳಿಗೆ ಮುಂಚಿತವಾಗಿ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಣೆ ಮಾಡಿತ್ತು ಎಂದು ಭದ್ರತಾ ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳ್ಳಸಾಗಣೆ ಮಾಡಿದ ಶಸ್ತ್ರಾಸ್ತ್ರ ಗಳನ್ನು ಬಳಸಿ ಇರಾನ್‌ನ ನೆಲದಿಂದಲೇ ಆ ದೇಶದ ಸೇನಾ ನೆಲೆಗಳು ಮತ್ತು ಸೇನೆಯ ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಗಳು ಹೇಳಿದ್ದಾರೆ.

ಸ್ಫೋಟಕಗಳನ್ನು ಹೊಂದಿರುವ ಡ್ರೋನ್‌ಗಳನ್ನು ಹಾರಿಸಲು ಇರಾನ್‌ನ ನೆಲದಲ್ಲೇ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಗುರಿಗಳನ್ನು ನಿಖರವಾಗಿ ಧ್ವಂಸಗೊಳಿಸಬಲ್ಲ ಶಸ್ತ್ರಾಸ್ತ್ರಗಳನ್ನೂ ಸಾಗಿಸಿ, ಅವುಗಳನ್ನು ವಾಹನಗಳಿಂದ ಹಾರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.

ಶುಕ್ರವಾರದ ವೈಮಾನಿಕ ದಾಳಿಯ ವೇಳೆ ಈ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಯಿತು. ಕ್ಷಿಪಣಿ ಲಾಂಚರ್‌ಗಳು ಮತ್ತು ನೆಲದಿಂದ ಆಗಸಕ್ಕೆ ಕ್ಷಿಪಣಿ ಹಾರಿಸುವ ವ್ಯವಸ್ಥೆಯನ್ನು ಇರಾನ್‌ನ ನೆಲದಿಂದಲೇ ಧ್ವಂಸಗೊಳಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲ್‌ ಅನ್ನು 'ಕಠಿಣ ಶಿಕ್ಷೆ'ಗೆ ಗುರಿಪಡಿಸಲಾಗುವುದು ಎಂದು ಇರಾನ್‌ನ ಪರಮೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಎಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries