ಕಾಸರಗೋಡು: ವೈದ್ಯ ಸಾಹಿತಿ, ಯಕ್ಷಗಾನ ಅರ್ಥಧಾರಿ ಡಾ. ರಮಾನಂದ ಬನಾರಿ ಅವರಿಗೆ ಜೂ 4ರಂದು 85ರ ಹರೆಯ ತಂಬುತ್ತಿದ್ದು, ಅವರ ಅಭಿಮಾನಿ ವಲಯ 85ರ ಸಂಭ್ರಮ ಆಚರಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ವೈದ್ಯಕೀಯ ಅನುಭವಗಳ ಹಿನ್ನೆಲೆಯಲ್ಲಿ ರಚಿಸಿದ ಆರೋಗ್ಯಗೀತೆ ಅತ್ಯಂತ ಮೌಲಿಕವಾದ ಕವನ ಸಂಕಲನವಾಗಿ ಮೂಡಿಬಂದಿದ್ದು,
ತಮ್ಮ ತೀರ್ಥರೂಪರಾದ ಕೀರಿಕ್ಕಾಡು ವಿಷ್ಣುಭಟ್ಟರ ಪ್ರಭಾವ, ಪ್ರೇರಣೆಯಿಂದ ಎಳವೆಯಿಂದಲೇ ಶ್ರೇಷ್ಠಕಲೆ ಯಕ್ಷಗಾನದಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡು ಉತ್ತಮ ಅರ್ಥಧಾರಿಯಾಗಿ ಮಿಂಚಿರುವುದಲ್ಲದೆ, ತಾಳಮದ್ದಳೆಯಲ್ಲಿ ಅರ್ಥಗಾರಿಕೆಗೆ ಕಾವ್ಯದ ಸ್ಪರ್ಶ ನೀಡಿದ್ದಾರೆ.
ಸುಮಾರು 45ವರ್ಷಕ್ಕೂ ಹಿಂದೆ ಕಾಸರಗೋಡು ಕನ್ನಡ ಲೇಖಕರ ಸಂಘ ಎಂಬ ಸಂಘಟನೆಯನ್ನು ಸ್ಥಾಪಿಸಿ, ಅದರ ಸ್ಥಾಪಕ ಅಧ್ಯಕ್ಷರಾಗಿ ಕನ್ನಡದ ಅಭಿವೃದ್ಧಿಪರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಡಾ. ಬನಾರಿ ಅವರು ಇಂದಿಗೂ ಓರ್ವ ಕಾಯಕಯೋಗಿಯಂತೆ ಕನ್ನಡ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ಮಂಜೇಶ್ವರದ ಗಿಳಿವಿಂಡು ಸಮಿತಿಯ ಸದಸ್ಯರಾಗಿ, ಎಡನೀರಿನ ಭಾರತೀ ಕಲಾಸದನದ ಸದಸ್ಯರಾಗಿ, ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ಮತ್ತು ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅದ್ಯಕ್ಷರಾಗಿ-ಹೀಗೆ ಅವಿಶ್ರಾಂತವಾದ ಕೆಲಸಗಳಲ್ಲಿ ನಿರತರಾಗಿದ್ದಾರೆ. ತಮ್ಮ ಎಂಬತ್ತೈದರ ಹರೆಯದಲ್ಲೂ ಬಹಳ ಉತ್ಸಾಹದಿಂದ ಕನ್ನಡಪರ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ಅವರು ಕಾಸರಗೋಡಿನ ಕನ್ನಡಿಗರಿಗೆಲ್ಲ ದಾರಿದೀಪವಾಗಿದ್ದಾರೆ.
ಕಾಸರಗೋಡಿನಲ್ಲಿ ಕನ್ನಡಕ್ಕಾಗಿ ಹೋರಾಟಮಾಡಿದ ಮುಂಚೂಣಿಯ ಮಹನೀಯರಲ್ಲಿ ಡಾ. ರಮಾನಂದ ಬನಾರಿ ಒಬ್ಬರಾಗಿದ್ದಾರೆ. ಕಾಸರಗೋಡಿನ ಸಮಸ್ಯೆಯ ಬಗ್ಗೆ ಕಾಸರಗೋಡು ಸಮಸ್ಯೆ: ಒಂದು ವಿಶ್ಲೇಷಣೆ' ಎಂಬ ಕೃತಿಯನ್ನೂ ಅವರು ಬರೆದಿದ್ದಾರೆ.






