ಮುಂಬೈ: ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ವಾಯುಯಾನ ಸುರಕ್ಷತಾ ನಿಯಂತ್ರಕ, ಸುರಕ್ಷತಾ ವ್ಯವಸ್ಥೆಯಲ್ಲಿ ಸಿಬ್ಬಂದಿ ಕೊರತೆ, ಸರಕಾರಿ ನಿಧಿಯ ಕೊರತೆಯಿಂದಾಗಿ ಪೈಲಟ್‌ಗಳ ತೀವ್ರ ಅಭಾವ; ಸರಕಾರದ ನಿರ್ಲಕ್ಷ್ಯದಿಂದಾಗಿ ಭಾರತೀಯ ನಾಗರಿಕ ವಾಯುಯಾನವು ವರ್ಷಗಳಿಂದಲೂ ಬಳಲುತ್ತಿದೆ ಮತ್ತು ಇದು ಪ್ರಯಾಣಿಕರಿಗೆ ಮಾರಕವಾಗಬಹುದು.
ವಾರದ ಹಿಂದೆ ಅಹ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ ಎಂದು thewire.in ವರದಿ ಮಾಡಿದೆ.
ವಿವಿಧ ಸರಕಾರಿ ಮತ್ತು ಸಂಸದೀಯ ಮೂಲಗಳಿಂದ ಸಂಗ್ರಹಿಸಲಾದ ದತ್ತಾಂಶಗಳು 2014ರಲ್ಲಿ 66 ಮಿಲಿಯನ್ ಪ್ರಯಾಣಿಕರಿದ್ದ ಭಾರತದ ವಾಯುಯಾನ ಕ್ಷೇತ್ರವು 2024ರಲ್ಲಿ 161 ಮಿಲಿಯನ್ ಪ್ರಯಾಣಿಕರೊಂದಿಗೆ ಹಲವು ಪಟ್ಟು ಬೆಳೆದಿದ್ದರೂ ಪ್ರಯಾಣಿಕರ ಸುರಕ್ಷತೆಯ ಹೊಣೆಯನ್ನು ಹೊಂದಿರುವ ಸಂಸ್ಥೆಗಳು ಗಾತ್ರದಲ್ಲಿ ಕುಗ್ಗಿವೆ, ಅವುಗಳಲ್ಲಿ ಪ್ರಮುಖ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ ಮತ್ತು ಪ್ರಮುಖ ಕಾರ್ಯಾಚರಣೆಗಳು ಸಂಭಾವ್ಯ ಹಿನ್ನಡೆಯನ್ನು ಎದುರಿಸುತ್ತಿವೆ ಎನ್ನುವುದನ್ನು ಸೂಚಿಸುತ್ತಿವೆ.
ಇವೆಲ್ಲವೂ ಪ್ರಯಾಣಿಕರ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡಬಹುದು ಮತ್ತು ಕಳೆದ ವಾರದ ವಿಮಾನ ಪತನದಂತಹ ಹಾರಾಟ ವಿಪತ್ತುಗಳಿಗೆ ಕಾರಣವಾಗಬಹುದು ಎಂದು ವಾಯುಯಾನ ಸುರಕ್ಷತಾ ತಜ್ಞರು,ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ದಲ್ಲಿನ ಮೂಲಗಳು ಮತ್ತು ಉದ್ಯಮದಲ್ಲಿನ ಅನುಭವಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ನಾಗರಿಕ ವಾಯುಯಾನ ಸಚಿವಾಲಯವು ಸಂಸತ್ತಿನಲ್ಲಿ ಹಂಚಿಕೊಂಡಿದ್ದ ಮಾಹಿತಿಯ ಪ್ರಕಾರ 2020ರಿಂದ ಜನವರಿ 2025ರವರೆಗೆ ಭಾರತೀಯ ದೇಶಿಯ ವಿಮಾನ ಯಾನ ಸಂಸ್ಥೆಗಳು ನಿರ್ವಹಿಸಿದ್ದ ಯಾನಗಳಲ್ಲಿ 2,461 ತಾಂತ್ರಿಕ ದೋಷಗಳು ಕಂಡುಬಂದಿದ್ದು, ಇವುಗಳಲ್ಲಿ ಅರ್ಧಕ್ಕೂ ಹೆಚ್ಚಿನ(1,288) ಪಾಲು ಇಂಡಿಗೋ ಏರ್‌ಲೈನ್ಸ್‌ನದಾಗಿದೆ. ಸ್ಪೈಸ್ ಜೆಟ್ 633 ಹಾಗೂ ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ 389 ತಾಂತ್ರಿಕ ದೋಷಗಳನ್ನು ವರದಿ ಮಾಡಿದ್ದವು.
ಕಳೆದೊಂದು ವರ್ಷದಲ್ಲೇ ದೇಶಿಯ ವಿಮಾನಯಾನ ಸಂಸ್ಥೆಗಳು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದ 23 ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 12 ಪ್ರಕರಣಗಳು ಏರ್ ಇಂಡಿಯಾ ಮತ್ತು ಅಂಗಸಂಸ್ಥೆಗಳಿಗೆ ಸಂಬಂಧಿಸಿದ್ದು, ಇವುಗಳಲ್ಲಿ ಕಳೆದ ವರ್ಷ ಏರ್ ಇಂಡಿಯಾ ಮುಂಬೈ-ರಿಯಾದ್ ಯಾನವನ್ನು ನಿರ್ವಹಿಸಲು ಅನನುಭವಿ ಸಿಬ್ಬಂದಿಗಳನ್ನು ನಿಯೋಜಿಸಿದ್ದ ಗಂಭೀರ ಘಟನೆಯೂ ಸೇರಿದೆ ಎಂದು ನಾಗರಿಕ ವಾಯುಯಾನ ಸಚಿವಾಲಯವು ಈ ವರ್ಷದ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ತಿಳಿಸಿತ್ತು.
ಆದಾಗ್ಯೂ,ಕಳೆದ ಎರಡು ವರ್ಷಗಳಲ್ಲಿ ನಾಗರಿಕ ವಾಯುಯಾನ ಸಚಿವಾಲಯದ ಬಜೆಟ್ ಅನ್ನು ಸುಮಾರು ಐದನೇ ಒಂದು ಭಾಗದಷ್ಟು ಕಡಿತಗೊಳಿಸಲಾಗಿದೆ. 2023-24ರ ಬಜೆಟ್‌ನಲ್ಲಿ ಅದಕ್ಕಾಗಿ 3,113 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದ ಮೋದಿ ಸರಕಾರವು 2024-25ರ ಬಜೆಟ್‌ನಲ್ಲಿ ಅದನ್ನು 2,357 ಕೋಟಿ ರೂ.ಗಳಿಗೆ ಇಳಿಸಿದೆ. ಸಚಿವಾಲಯವು ಆ ವರ್ಷಕ್ಕಾಗಿ 2,658 ಕೋಟಿ ರೂ.ಗಳ (ಸರಕಾರವು ಹಂಚಿಕೆ ಮಾಡಿದ್ದಕ್ಕಿಂತ 301 ಕೋಟಿ ರೂ.ಅಧಿಕ) ಪರಿಷ್ಕೃತ ಅಂದಾಜುಗಳನ್ನು ಸಲ್ಲಿಸಿದ್ದರೂ ಮೋದಿ ಸರಕಾರವು ತನ್ನ ಇತ್ತೀಚಿನ ಬಜೆಟ್‌ನಲ್ಲಿ ಅದನ್ನು ಇನ್ನಷ್ಟು ಕಡಿತಗೊಳಿಸಿ 2,400 ರೂ.ಗಳಿಗೆ ಇಳಿಸಿದೆ, ಅಂದರೆ ಎರಡು ವರ್ಷಗಳಲ್ಲಿ ಶೇ.23ರಷ್ಟು ಕಡಿಮೆಯಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಸಚಿವಾಲಯದ ಬಂಡವಾಳ ವೆಚ್ಚದಲ್ಲಿ ತೀವ್ರ ಕುಸಿತ ಕಂಡುಬಂದಿದೆ. 2023-24ರಲ್ಲಿ 755 ಕೋಟಿ ರೂ.ಗಳಿದ್ದ ಅದು ಈ ವರ್ಷ ಕೇವಲ 70 ಕೋಟಿ ರೂ.ಗಳಿಗೆ ಇಳಿದಿದೆ,ಅಂದರೆ ಶೇ.91ರಷ್ಟು ಕಡಿತವಾಗಿದೆ.
ಇದರ ಒಂದು ನೇರ ಪರಿಣಾಮ ಡಿಜಿಸಿಎ ಮೇಲೆ ಉಂಟಾಗಿದೆ.
ವಿಮಾನಯಾನ ಸಂಸ್ಥೆಗಳು ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸುತ್ತಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದರಿಂದ ಹಿಡಿದು ಲೆಕ್ಕ ಪರಿಶೋಧನೆ ಮತ್ತು ತಪಾಸಣೆ,ವಾಯು ಸುರಕ್ಷತಾ ಮಾರ್ಗಸೂಚಿಗಳು ಮತ್ತು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಹೊರಡಿಸುವವರೆಗೆ ಪ್ರತಿಯೊಂದಕ್ಕೂ ಡಿಜಿಸಿಎ ಹೊಣೆಗಾರನಾಗಿದೆ. ಜೊತೆಗೆ ನಿಯಮಗಳ ಉಲ್ಲಂಘನೆಗಾಗಿ ತಪ್ಪಿತಸ್ಥ ವಿಮಾನಯಾನ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವ ಹೊಣೆಗಾರಿಕೆಯೂ ಅದರ ಮೇಲಿದೆ.
ಈ ಹಣಕಾಸಿನ ಕೊರತೆಯು ಡಿಜಿಸಿಎದಲ್ಲಿ ಹೆಚ್ಚುತ್ತಿರುವ ಖಾಲಿ ಹುದ್ದೆಗಳೊಂದಿಗೂ ಗುರುತಿಸಿಕೊಂಡಿದೆ. 2020ರಲ್ಲಿ 471ರಷ್ಟಿದ್ದ ಖಾಲಿ ಹುದ್ದೆಗಳ ಸಂಖ್ಯೆ ಈ ವರ್ಷದ ಮಾರ್ಚ್ ವೇಳೆಗೆ 814ಕ್ಕೇರಿದೆ. ಈ ವರ್ಷದ ಎಪ್ರಿಲ್ ತಿಂಗಳ ಸಂಸದೀಯ ಅಂಕಿಅಂಶಗಳ ಪ್ರಕಾರ ಒಟ್ಟು 1692 ಹುದ್ದೆಗಳ ಪೈಕಿ ಶೇ.48ರಷ್ಟು ಖಾಲಿಯಿದ್ದವು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ ಪಾಡೂ ಇದೇ ಆಗಿದೆ. 2020ರಲ್ಲಿ 27,074ರಷ್ಟಿದ್ದ ಮಂಜೂರಾದ ಹುದ್ದೆಗಳ ಸಂಖ್ಯೆ ಮಾರ್ಚ್ 2025ರಲ್ಲಿ 25,730ಕ್ಕೆ ಇಳಿದಿದೆ. ಇದು ಸಾಲದೆಂಬಂತೆ 9,502 ಹುದ್ದೆಗಳು ಖಾಯಂ ಆಗಿ ಖಾಲಿ ಉಳಿದುಕೊಂಡಿವೆ, ಇದು ಮಂಜೂರಾದ ಒಟ್ಟು ಹುದ್ದೆಗಳ ಶೇ.36ಕ್ಕೂ ಅಧಿಕವಾಗಿದೆ. ಎಎಐ ಸಿಬ್ಬಂದಿಗಳು ವಿಮಾನ ನಿಲ್ದಾಣಗಳಲ್ಲಿ ವಾಯುಸಂಚಾರ ನಿಯಂತ್ರಣ,ಸಂವಹನ ಮತ್ತು ಮಾರ್ಗಸೂಚಕ ವ್ಯವಸ್ಥೆಗಳು ಹಾಗೂ ಸರಕು ಟರ್ಮಿನಲ್‌ಗಳ ನಿರ್ವಹಣೆ ಸೇರಿದಂತೆ ಪ್ರಮುಖ ಸೇವೆಗಳ ಜವಾಬ್ದಾರಿಯನ್ನು ಹೊಂದಿದ್ದಾರೆ.
ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವ ಹೊಣೆಯನ್ನು ಹೊತ್ತಿರುವ ನಾಗರಿಕ ವಾಯುಯಾನ ಸುರಕ್ಷತೆ ಘಟಕದ 598 ಹುದ್ದೆಗಳ ಪೈಕಿ ಶೇ.37ರಷ್ಟು ಖಾಲಿಯಿವೆ ಎನ್ನುವುದನ್ನೂ ಸಂಸತ್ ದತ್ತಾಂಶಗಳು ಬಹಿರಂಗಗೊಳಿಸಿವೆ.




