ಚೆನ್ನೈ: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ವರಿಷ್ಠ ಅಮಿತ್ ಶಾ, ಮೂರು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ.
ಜುಲೈ ಎರಡನೇ ವಾರದಲ್ಲಿ ಶಾ ಭೇಟಿ ನಿಗದಿಯಾಗಿದ್ದು, 2026ರ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆಗಾಗಿ ಪಕ್ಷದ ಪದಾಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಇದೇ ಸಂದರ್ಭ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಆ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ, ಆಡಳಿತಾರೂಢ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ಸರ್ಕಾರವನ್ನು (ಎಸ್‌ಪಿಎ) ಮುಂಬರುವ ಚುನಾವಣೆಯಲ್ಲಿ ಮಣಿಸಲು ಕಾರ್ಯತಂತ್ರ ರೂಪಿಸುವ ನಿರೀಕ್ಷೆಯಿದೆ.
ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಸಹ ಪೂರ್ವ ಸಿದ್ಧತೆಗಳನ್ನು ಬಿರುಸುಗೊಳಿಸಿದೆ. ಗೆಲುವಿನ ಕಾರ್ಯತಂತ್ರ ರೂಪಿಸುತ್ತಿದೆ. ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ಪಳನಿಸ್ವಾಮಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ಯೋಜಿಸಿದ್ದು, ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವ ಜೊತೆಗೆ ಆಡಳಿತಾರೂಢ ಡಿಎಂಕೆ ವಿರುದ್ಧ ಪ್ರಖರ ವಾಗ್ದಾಳಿ ನಡೆಸಲು ಅಣಿಯಾಗಿದ್ದಾರೆ ಎಂದು ಪಕ್ಷದ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.
'ಅಮಿತ್ ಶಾ ತಂತ್ರಗಾರಿಕೆಯಿಂದಲೇ ಎಐಎಡಿಎಂಕೆಯು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತೆ ಸೇರ್ಪಡೆಗೊಂಡಿದೆ. ಜುಲೈ 8ರಂದು ಶಾ ಮತ್ತೆ ಭೇಟಿ ನೀಡುವ ನಿರೀಕ್ಷೆಯಿದ್ದು, ಈ ಸಂದರ್ಭ ಮೈತ್ರಿಯಲ್ಲಿನ ಬಿರುಕನ್ನು ಸರಿಪಡಿಸಲಿದ್ದಾರೆ. ಒಟ್ಟಾಗಿ ಚುನಾವಣೆ ಎದುರಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ' ಎಂದು ಬಿಜೆಪಿ ಮುಖಂಡರೊಬ್ಬರು ಮಾಹಿತಿ ನೀಡಿದರು.
ಶಾ ಹೇಳಿಕೆಗೆ ಟೀಕೆ
'ದೇಶದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡುವ ಜನರು ನಾಚಿಕೆಪಡುವ ಸಮಯ ದೂರವಿಲ್ಲ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯನ್ನು ತಮಿಳುನಾಡು ಸರ್ಕಾರ ಶನಿವಾರ ಟೀಕಿಸಿದೆ.
'ಇಂಗ್ಲಿಷ್ ಭಾಷೆಯಿಂದ ನಮ್ಮ ಸಂಸ್ಕೃತಿಗೆ ಹಾನಿಯಾಗಲ್ಲ. ಆದರೆ ಅದು ಬಡವರು, ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಸಬಲೀಕರಣಕ್ಕೆ ಕಾರಣವಾಗಲಿದೆ. ತಳ ಸಮುದಾಯಗಳ ಏಳ್ಗೆಗೆ ಪೂರಕವಾಗಲಿದೆ' ಎಂದಿದೆ.
'ತಮಿಳು ನಮ್ಮ ಅಸ್ಮಿತೆ. ಇಂಗ್ಲಿಷ್ ಅವಕಾಶ ಒದಗಿಸಲಿದೆ. ಈ ಎರಡೂ ಭಾಷೆಗಳು ತಮಿಳುನಾಡಿನಲ್ಲಿ ಪ್ರತಿ ಮಗುವಿಗೂ ಸಿಗಲಿದೆ' ಎಂದು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಜಿ ಹೇಳಿದ್ದಾರೆ.
'ಅಮಿತ್ ಶಾ ಅವರ ಭಯವು ಇಂಗ್ಲಿಷ್ ಕುರಿತಂತಲ್ಲ; ಈ ಭಾಷೆ ಕಲಿಯುವುದರಿಂದ ಸಿಗಲಿರುವ ಸಮಾನತೆ ಮತ್ತು ಅಭಿವೃದ್ಧಿಯ ಬಗ್ಗೆ. ಇಂಗ್ಲಿಷ್ ಭಾಷೆಯು ವಸಾಹತುಶಾಹಿಯ ಅವಶೇಷವಲ್ಲ. ಜಾಗತಿಕ ಪ್ರಗತಿಯ ಸಾಧನವಾಗಿದೆ' ಎಂದಿದ್ದಾರೆ.




