ನವದೆಹಲಿ: ಅಹ್ಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದು, ಅಚ್ಚರಿ ಎಂದರೆ ಈ ವಿಮಾನ ದುರಂತ ಸಂಭವಿಸಿದ ದಿನ ಬೆಳಗ್ಗೆ ಪತ್ರಿಕೆಯೊಂದರ ಜಾಹಿರಾತು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಗುಜರಾತ್ನ ಅಹಮದಾಬಾದ್‌ನಿಂದ (Ahmedabad Plane Crash) ಗ್ಯಾಟ್ವಿಕ್ (ಇಂಗ್ಲೆಂಡ್)ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿತು. ವಿಮಾನದಲ್ಲಿ 10 ಸಿಬ್ಬಂದಿ, ಇಬ್ಬರು ಪೈಲಟ್ ಗಳು ಸೇರಿದಂತೆ 242 ಜನರು ಈ ವಿಮಾನದಲ್ಲಿದ್ದರು. ಈ ಪೈಕಿ 241 ಮಂದಿ ಸಾವನ್ನಪ್ಪಿದ್ದಾರೆ. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು.
ಈ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಇದ್ದ ಡಾಕ್ಟರ್ ಹಾಸ್ಟೆಲ್ನೊಳಗೆ ನುಗ್ಗಿ ಅಲ್ಲಿಯೇ ಸ್ಫೋಟಗೊಂಡಿದೆ. ಇದರಿಂದ ವಿಮಾನದಲ್ಲಿರುವ ಪ್ರಯಾಣಿಕರು ಮಾತ್ರವಲ್ಲದೆ 5 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಅಪಘಾತ ಸಂಭವಿಸಿದಾಗ ಅಹಮದಾಬಾದ್‌ನ ಮೇಘನಿನಗರ ಪ್ರದೇಶದ ಬಳಿಯ ಧಾರ್ಪುರದಿಂದ ಭಾರೀ ಹೊಗೆ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅಲ್ಲದೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಮಾನ ದುರಂತ ಬೆನ್ನಲ್ಲೇ ಪತ್ರಿಕಾ ಜಾಹಿರಾತು ವೈರಲ್
ಇನ್ನು ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತಕ್ಕೀಡಾದ ಅದೇ ದಿನ ರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದರಲ್ಲಿ ಜಾಹಿರಾತು ವೈರಲ್ ಆಗುತ್ತಿದೆ. ಪ್ರವಾಸೋಧ್ಯಮಕ್ಕೆ ಕುರಿತ ಜಾಹಿರಾತಿನಲ್ಲಿ ಏರ್ ಇಂಡಿಯಾ ವಿಮಾನ ಕಟ್ಟಡದಿಂದ ಹೊರಗೆ ಬರುತ್ತಿರುವ ಚಿತ್ರವಿದ್ದು, ಆ ಚಿತ್ರದಂತೆಯೇ ನಿನ್ನೆ ಏರ್ ಇಂಡಿಯಾ ವಿಮಾನ ಬಿಜೆ ವೈದ್ಯಕೀಯ ಕಾಲೇಜು ಆಸ್ಪತ್ರೆಯ UG ಹಾಸ್ಟೆಲ್ ನ ಕಟ್ಟಡಕ್ಕೆ ಢಿಕ್ಕಿಯಾಗಿದೆ. ಇದೀಗ ಈ ಜಾಹಿರಾತು ವ್ಯಾಪಕ ವೈರಲ್ ಆಗುತ್ತಿದೆ.
ಇಷ್ಟಕ್ಕೂ ಏನದು ಜಾಹಿರಾತು?
ವಿಮಾನ ಪತನವಾದ ದಿನ ಬೆಳಗ್ಗೆ ಗುಜರಾತ್‌ನಲ್ಲಿ ಜನಪ್ರಿಯವಾಗಿರುವ ಮಿಡ್-ಡೇ ಪತ್ರಿಕೆಯು ತನ್ನ ಮುಖಪುಟದಲ್ಲಿ ಕಿಡ್‌ಝಾನಿಯಾ ಸಂಸ್ಥೆಯ ಜಾಹಿರಾತು ಪ್ರಕಟಿಸಿತ್ತು. ಮುಂಬರುವ ಫಾದರ್ಸ್ ಡೇ ವಾರಾಂತ್ಯದ ಕಾರ್ಯಕ್ರಮವನ್ನು ಪ್ರಚಾರ ಮಾಡುವ ದೊಡ್ಡ ಜಾಹೀರಾತನ್ನು ಇದು ಒಳಗೊಂಡಿತ್ತು. 4-16 ವರ್ಷ ವಯಸ್ಸಿನ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಒಳಾಂಗಣ ಚಿಕಣಿ ನಗರವಾದ ಕಿಡ್‌ಝಾನಿಯಾ, ಮಕ್ಕಳು ಪೈಲಟ್‌ಗಳು, ವೈದ್ಯರು, ಅಡುಗೆಯವರು ಮತ್ತು ಎಂಜಿನಿಯರ್‌ಗಳಂತಹ ನೈಜ-ಪ್ರಪಂಚದ ವೃತ್ತಿಗಳನ್ನು ನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ.




